

ಅಥಣಿ: ದೈನಂದಿನ ವಸ್ತುಗಳು ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಎಸ್‌ಸಿ-ಎಸ್‌ಟಿ ಘಟಕ, ಯುವ, ಮಹಿಳಾ ಮತ್ತು ಒಬಿಸಿ ಘಟಕ ಸೇರಿ ಅಥಣಿ ಮತ್ತು ತೆಲಸಂಗ ಬ್ಲಾಕ್ ವತಿಯಿಂದ ಏಕಕಾಲಕ್ಕೆ 11 ಪೆಟ್ರೋಲ್ ಬಂಕ್‌ಗಳ ಎದುರು ಸೋಮವಾರ ಪ್ರತಿಭಟಿಸಲಾಯಿತು. ‘ಮೋದಿ ಹಟಾವೋ ದೇಶ ಬಚಾವೋ’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿದ್ದು, ಬಡವರು, ರೈತರು, ಮತ್ತು ದುಡಿಯುವ ವರ್ಗಕ್ಕೆ ತೀವ್ರ ತೊಂದರೆ ಆಗುತ್ತಿದೆ. ಈ ಹಿಂದೆ ಪೆಟ್ರೋಲ್ ದರ 70 ರೂಪಾಯಿ ತಲುಪಿದಾಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಸ್ಮೃತಿ ಇರಾನಿ ಅವರು ಬಳೆ ಕಳಿಸಿ ಪ್ರಳಿತಿಭಟನೆ ಮಾಡಿದ್ದರು. ಈಗ ಬಿಜೆಪಿ ಸರ್ಕಾರದ ಆಡಳಿತದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಪೆಟ್ರೋಲ್ ದರ ಶತಕ ಬಾರಿಸುತ್ತಿದೆ. ಈಗ ಸ್ಮೃತಿ ಎಷ್ಟು ಬಳೆ ಕಳಿಸುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅನಿಲ ಸುಣಧೋಳಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರಿಗೆ ಹೊರೆ ಉಂಟು ಮಾಡುತ್ತಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ ಎಂದರು. ಮುಖಂಡರಾದ ಬಸವರಾಜ ಬುಟಾಳಿ, ರಾವಸಾಬ್ ಐಹೊಳೆ, ಅಸ್ಲಂ ನಾಲಬಂದ, ಬಾಬು ಖೇಮಲಾಪುರ, ಗುಲಾಬಹುಸೇನ್ ನಾಲಬಂದ, ವಿಲೀನರಾಜ ಯಳಮಲ್ಲೆ, ರಾಜು ಜಮಖಂಡಿಕರ, ಸಯ್ಯದ್ ಅಮೀನ್ ಗದ್ಯಾಳ, ಶಿವು ಗುಡ್ಡಾಪುರ, ಮಂಜು ಹೊಳಿಕಟ್ಟಿ, ಬೀರಪ್ಪ ಯಂಕಚ್ಚಿ, ಸುನೀಲ ಸಂಖ, ಶಿವು ಸಂಖ, ಮಯೂರ ಸಿಂಘೆ, ಮಹಾಂತೇಶ ಬಾಡಗಿ, ರವಿ ಬಡಕಂಬಿ, ಸಚಿನ ಬುಟಾಳೆ, ಸತ್ಯಪ್ಪ ಭಾಗ್ಯಣ್ಣವರ, ರವಿ ಬಕಾರಿ, ಶ್ರೀಕಾಂತ ಪೂಜಾರಿ, ಉಮರ್ ಹುಲಗಬಾಳಿ, ಯುಸೂಫ್ ಮುಲ್ಲಾ, ಶಬ್ಬೀರ್ ಸಾತಬಚ್ಚೆ ಇತರರು ಇದ್ದರು.
ಕುಡಚಿ ವರದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪಟ್ಟಣದ ಪೆಟ್ರೋಲ್ ಪಂಪ್ ಎದುರು ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಘೋಷಣೆ ಕೂಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಪಡಿಸಿದರು. ಕುಡಚಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ
ರೇವಣ್ಣ ಸರವ, ಘಟಕದ ಅಧ್ಯಕ್ಷ ಇಮಾಮುದ್ದೀನ್ ಸಜ್ಜನ್, ಸಂಜೀವ ರಡರಟ್ಟಿ, ಸಾಧಿಕ್ ಸಜ್ಜನ್, ಅಬ್ದುಲ್‌ಖಾದರ್ ರೋಹಿಲೆ, ಮುಶ್ಫಿಕ್ ಜಿನ್ನಾಬಡೆ, ಸಾಕೀಫ್ ಪಾಳೇಗಾರ, ನಿಸ್ಸಾರ್ ಭಾಗೆ, ಮೈಬೂಬ್ ಜಾತಗಾರ, ಶೋಯಬ್ ಮಲಾಡಿ, ಅವಿನಾಶ ಕಾಂಬಳೆ ಇತರರು ಇದ್ದರು.