ಬೆಲೆ ಏರಿಕೆ ಬಿಸಿಯಿಂದ ಜನರು ಕಂಗಾಲು

22Kittur1
ಚನ್ನಮ್ಮ ಕಿತ್ತೂರಿಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ ಅವರನ್ನು ಚನ್ನಮ್ಮಾಜಿ ಭಾವಚಿತ್ರ ನೀಡಿ ಮುಖಂಡರು ಸನ್ಮಾನಿಸಿದರು. ವಿನಯ ಕುಲಕರ್ಣಿ, ಬಾಬಾಸಾಹೇಬ ಪಾಟೀಲ ಇತರರು ಇದ್ದರು.
Published on

ಚನ್ನಮ್ಮನ ಕಿತ್ತೂರು: ಹಿರಿಯರ ತ್ಯಾಗ, ಬಲಿದಾನ ಫಲವಾಗಿ ದೊರೆತ ಸ್ವಾತಂತ್ರೃದ ವಜ್ರಮಹೋತ್ಸವ ಆಚರಣೆಯನ್ನು ಐತಿಹಾಸಿಕ ಕಿತ್ತೂರಿನಿಂದ ಪ್ರಾರಂಭಿಸುತ್ತಿರುವುದು ನನ್ನ ಭಾಗ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಸ್ಥಳೀಯ ಕೋಟೆ ಮುಂಭಾಗದಲ್ಲಿ ಕಾಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವ ಆಚರಣೆ ನಿಮಿತ್ತ ಬೆಳಗಾವಿ ಜಿಲ್ಲೆಯಲ್ಲಿ 75 ಕಿ.ಮೀ. ಪಾದಯಾತ್ರೆ ಮಾಡಿ, ನಂತರ ಬೆಂಗಳೂರಿನಲ್ಲಿ 75 ಸಾವಿರ ಜನರೊಂದಿಗೆ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೆರುತ್ತಿದ್ದು ಅದಕ್ಕೆ ತಕ್ಕಂತೆ ಆದಾಯವಿಲ್ಲದೆ ಜನರು ಕಂಗಾಲಾಗಿದ್ದಾರೆ. ಅಚ್ಛೆ ದಿನ ಬರುವುದು ಯಾವಾಗ ಎಂದು ವ್ಯಂಗ್ಯವಾಡಿದರು. ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ವಿಷಯದಲ್ಲಿ ಸಚಿವ ಈಶ್ವರಪ್ಪ ಅವರಿಗೆ ಸರ್ಕಾರ ಕ್ಲೀನ್ ಚಿಟ್ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ನ್ಯಾಯಾಂಗ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ರಾಜ್ಯದಲ್ಲಿ ಈಗಿರುವ 40 ಪರ್ಸೆಂಟೇಜ್ ಸರ್ಕಾರ ತೊಲಗಿ ಹೊಸ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಡಿ.ಬಿ.ಇನಾಂದಾರ ಅವರನ್ನು ಬಿಟ್ಟು ರಾಜಕಾರಣ ಮಾಡಲು ನಾನು ಇಲ್ಲಿ ಬಂದಿಲ್ಲ. ಅನಾರೋಗ್ಯದ ನಿಮಿತ್ತ ಡಿ.ಬಿ.ಇನಾಂದಾರ ಗೈರಾಗಿದ್ದಾರೆ ಎಂದು ಹೇಳಿದರು. ಕೆಪಿಸಿಸಿ ಉಪಾಧ್ಯಕ್ಷ ವಿನಯ ಕುಲಕರ್ಣಿ ಹಾಗೂ ಕಿತ್ತೂರು ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮಾಜಿ, ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಕಾರ್ಯಕರ್ತರ ಪ್ರತಿಭಟನೆ: ಮೂಲ ಕಾಂಗ್ರೆಸ್ಸಿಗರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದ್ದು, ಇತ್ತೀಚೆಗೆ ಪಕ್ಷಕ್ಕೆ ಸೇರಿದ ಕೆಲವರಿಗೆ ಪಕ್ಷ ಮಣೆ ಹಾಕುತ್ತಿದೆ. ಇದನ್ನು ಖಂಡಿಸುವುದಾಗಿ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ತೆರಳಿದ ಡಿಕೆಶಿ, ಪಕ್ಷದಲ್ಲಿ ಏನೇ ಮನಸ್ತಾಪಗಳಿದ್ದರೂ ಮುಖಂಡರ ಸಮ್ಮುಖದಲ್ಲಿ ಸರಿಪಡಿಸೋಣ. ಈ ರೀತಿ ಪ್ರತಿಭಟನೆ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನಪಡಿಸಲೆತ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net