

ಹಾಸನ: ಹಿಂದೂ ಸಂಪ್ರದಾಯದ ಪ್ರಕಾರ ನಡೆಯುವ ವರ್ಷದ ಮೊದಲ ಹಬ್ಬ ಯುಗಾದಿ ಆಚರಿಸಲು ಜಿಲ್ಲೆಯ ಜನರು ಕಾತುರರಾಗಿದ್ದು, ಬೆಲೆ ಏರಿಕೆ ಬಿಸಿಯ ನಡುವೆಯೂ ವ್ಯಾಪಾರ ವಹಿವಾಹಿಟನಲ್ಲಿ ತೊಡಗಿದರು.
40 ಡಿಗ್ರಿ ತಾಪಮಾನದ ಮಧ್ಯೆಯೂ ಸೋಮವಾರ ತಂಡೋಪತಂಡವಾಗಿ ಬಂದ ಗ್ರಾಹಕರು ಪೂಜಾ ಸಾಮಾಗ್ರಿ, ಹಣ್ಣು ಹಂಪಲು, ಹೊಸ ಬಟ್ಟೆ ಖರೀದಿಗೆ ಮುಗಿಬಿದ್ದರು. ನಗರದ ಕಟ್ಟಿನಕೆರೆ ಮಾರುಕಟ್ಟೆ, ಕಸ್ತೂರ ಬಾ ರಸ್ತೆ, ಮಹಾವೀರ ವೃತ್ತದಲ್ಲಿ ಜನಜಂಗುಳಿಯಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಬೆಳಿಗ್ಗೆಯಿಂದ ಬೆರಳಿಕೆಯ ಜನರು ಮಾರುಕಟ್ಟೆಯತ್ತ ಬಂದರೆ ಸಂಜೆಯಾಗುತ್ತಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಂದರು. ಸಂಜೆ 4ರ ಬಳಿಕ ಮಾರುಕಟ್ಟೆಯಲ್ಲಿ ಬೈಕ್‌ಗಳ ಸಂಚಾರಕ್ಕೂ ಜಾಗವಿಲ್ಲದಷ್ಟು ಜನರು ತುಂಬಿದ್ದರು.
ವಾಡಿಕೆ ಮಳೆಯಾಗದೆ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ಇದ್ಯಾವುದರ ಪರಿವೇ ಇಲ್ಲದಂತೆ ಮಹಿಳೆಯರು ವಿವಿಧ ಪದಾರ್ಥಗಳ ಖರೀದಿಸಿದರು. ಕುಟುಂಬ ಸಮೇತ ಬಂದಿದ್ದ ಪುರುಷ-ಮಹಿಳೆಯರು ದರ ಏರಿಕೆಯಿಂದ ಕಂಗಾಲಾಗಿ ಚೌಕಾಸಿ ಮಾಡಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಬೇಸಿಗೆಯಿಂದ ಹೂವು, ಹಣ್ಣುಗಳ ಇಳುವರಿಯಲ್ಲಿ ಕುಸಿತವಾಗಿದ್ದು, ಬೆಲೆ ಜೇಬು ಸುಡುತ್ತಿದೆ. ಅಧಿಕ ಪ್ರಮಾಣದಲ್ಲಿ ಹೂವು, ಹಣ್ಣು ಬೇಕಿದ್ದ ಗ್ರಾಹಕರಿಗೆ ಪೂರೈಕೆ ಸಾಧ್ಯವಾಗದ ಕಾರಣ ರಾತ್ರೋರಾತ್ರಿ ಬೆಂಗಳೂರಿನಿಂದ ಸಹ ತರಿಸಿಕೊಂಡಿದ್ದಾರೆ.
ಸೋಮವಾರ ನಗರದ ಮಾರುಕಟ್ಟೆಯಲ್ಲಿ ವಿವಿಧ ಪದಾರ್ಥಗಳ ದರ ಇಂತಿದೆ. ಸೇಬು ಕೆ.ಜಿ.ಗೆ 180 ರೂ., ಮೊಸಂಬಿ 80 ರೂ., ದಾಳಿಂಬೆ 160, ದ್ರಾಕ್ಷಿ 80, ಸಪೋಟಾ 80, ಬಾಳೆಹಣ್ಣು 80 ರಿಂದ 100, ಜವನ ಒಂದು ಕಟ್ಟಿಗೆ 30 ರೂ., ಮಾವಿನ ಸೊಪ್ಪು ಒಂದು ಕಟ್ಟಿಗೆ 20 ರೂ. ಬೇವಿನ ಸೊಪ್ಪು ಕಟ್ಟಿಗೆ 10 ರೂ., ಚೆಂಡು ಹೂವು ಒಂದು ಮಾರಿಗೆ 50 ರೂ., ಸೇವಂತಿ ಹೂವು ಮಾರಿಗೆ 150 ರೂ., ಕನಕಾಂಬರ ಒಂದು ಮಾರಿಗೆ 150 ರೂ. ನಂತೆ ಮಾರಾಟವಾಯಿತು.
ಹಣ್ಣು, ತರಕಾರಿ ಹಾಗು ಹೂವು ಪದಾರ್ಥಗಳ ದಿಢೀರ್ ಬೆಲೆ ಏರಿಕೆಯಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಉತ್ತಮ ಮಳೆಯಾಗಿದ್ದರೆ ಸುಲಭದಲ್ಲಿ ಸಾಮಾಗ್ರಿ ಸಿವು. ಆದರೆ ಸಾಮಾಗ್ರಿಗಳ ಖರೀದಿಗೆ ಬೇರೆ ಜಿಲ್ಲೆಯ ಮೊರೆ ಹೋಗಬೇಕಾಗಿದೆ. ಕಡಿಮೆ ಬೆಲೆಗೆ ಸಿಗದ ಕಾರಣಕ್ಕೆ ಕೇಳಿದಷ್ಟು ಕೊಟ್ಟು ತಂದಿದ್ದೇವೆ, ವ್ಯಾಪಾರ ಆಗದಿದ್ದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.