ಬೆಲೆ ಏರಿಕೆ ನಡುವೆಯೂ ಕಳೆ ಕಟ್ಟಿದ ಹಬ್ಬ

25 yelandur 01
Published on

ಯಳಂದೂರು: ಹೂ, ಹಣ್ಣುಗಳ ಬೆಲೆ ಏರಿಕೆಯ ನಡುವೆಯೂ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ, ಸಡಗರಕ್ಕೆ ಧಕ್ಕೆಯಾಗಲಿಲ್ಲ.
ಬೆಳಗ್ಗೆಯಿಂದಲೇ ಮಹಿಳೆಯರು ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮೀ ಪೂಜೆ ನೆರವೇರಿಸಿದರು. ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ್ಕ ಹೊಸ ಸೀರೆ, ಚಿನ್ನ, ಬೆಳ್ಳಿ ಆಭರಣ, ಹೂ, ಹಣ್ಣುಗಳಿಂದ ಸಿಂಗರಿಸಿದ್ದರು. ತುಪ್ಪದ ದೀಪಗಳು, ಧೂಪಗಳಿಂದ ವಿಶೇಷ ಪೂಜೆ ಮಾಡಿದರು. ಮುತ್ತೈದೆಯರಿಗೆ ಅರಿಶಿಣ, ಕುಂಕುಮ ನೀಡಿದರು.

ತಟ್ಟದ ಬೆಲೆ ಏರಿಕೆ ಬಿಸಿ: ಈ ಬಾರಿ ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ, ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಆದರೂ ಭಕ್ತರ ಸಂಭ್ರಮಕ್ಕೆ ಅಡ್ಡಿಯಾಗಲಿಲ್ಲ. ಕನಕಾಂಬರ ಹೂ. ಕೆಜಿಗೆ 1,000 ರೂ. ರಿಂದ 1200 ರೂ.ಗೆ ಮಾರಾಟವಾದರೆ, ಬಟನ್ ಗುಲಾಬಿ 400 ರೂ., ಮಲ್ಲಿಗೆ, ಕಾಕಡ 500 ರೂ. ಗೆ ಮಾರಾಟವಾಯಿತು. ಸೇವಂತಿಗೆ ಹೂ ಮೀಟರ್‌ಗೆ 60 ರೂ. ಹಣ ನೀಡಿ ಭಕ್ತರು ಖರೀದಿಸಿದರು. ಇತ್ತ ಚೆಂಡು ಹೂ ಕೂಡ ಭರ್ಜರಿ ವ್ಯಾಪಾರವಾಯಿತು. ಕೆಜಿ ಹೂವಿಗೆ 50 ರೂ. ಇತ್ತು. ಸೇಬು ಕೆಜಿ 180 ರೂ. ರಿಂದ 200 ರೂ.ಗೆ ಮಾರಾಟವಾದರೆ, ದಾಳಿಂಬೆ ಕೆಜಿಗೆ 80 ರೂ., ದ್ರಾಕ್ಷಿ 150 ರೂ. ಏಲಕ್ಕಿ ಬಾಳೆಹಣ್ಣು ಕೆಜಿಗೆ 70ರೂ. ಬೆಲೆ ಇತ್ತು. ಹೂ, ಹಣ್ಣು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.

ಮದ್ದೂರಿನಲ್ಲಿ ಸಂಭ್ರಮ: ತಾಲೂಕಿನ ಮದ್ದೂರು ಗ್ರಾಮದ ಸುವರ್ಣಾವತಿ ನದಿ ದಡದಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಹಾಲಕ್ಷ್ಮೀ ದೇಗುಲದಲ್ಲಿ ಶುಕ್ರವಾರ ಲಕ್ಷ್ಮೀ ಮೂರ್ತಿಯನ್ನು ವಿಶೇಷ ಹೂಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಅಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ದೇಗುಲಕ್ಕೆ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ, ದೇವಿಯ ದರ್ಶನವನ್ನು ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net