

ಚಾಮರಾಜನಗರ: ತಾಲೂಕಿನ ಬೆಲವತ್ತಾ ಡ್ಯಾಂ ಮತ್ತು ಹೊಂಗನೂರು ಹಿರಿಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಆಗ್ರಹಿಸಿದರು.
ಕೊಳ್ಳೇಗಾಲ ವಿಧಾನಸಭಾ ವ್ಯಾಪ್ತಿಗೆ ಬರುವ ಬೆಲವತ್ತಾ ಡ್ಯಾಂ ನಿರ್ಮಾಣ ಬಿ.ರಾಚಯ್ಯ ಅವರ ಶ್ರಮವಾಗಿದೆ. ಈ ಡ್ಯಾಂ 971 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿದ್ದು, ಈ ಭಾಗದಲ್ಲಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಸಮುದಾಯಗಳ ಜನರೇ ಹೆಚ್ಚಾಗಿ ವಾಸಮಾಡುತ್ತಿದ್ದಾರೆ. ಹೊಂಗನೂರು, ಜ್ಯೋತಿಗೌಡನಪುರ, ರೇಚಂಬಳ್ಳಿ, ಅಮ್ಮನಪುರ ಹಾಗೂ ಇನ್ನಿತರೆ 15 ಗ್ರಾಮಗಳ ರೈತರಿಗೆ ಇದು ಅನುಕೂಲವಾಗಲಿದೆ. ಅದಲ್ಲದೇ ಹೊಂಗನೂರಿನ ಪುರಾತನವಾದ ಹಿರಿಕೆರೆ ಭಾಗದಲ್ಲಿ ಆನೆಕಲ್ಲು, ಕುಂತಿಕಲ್ಲು ಹಾಗೂ ಇನ್ನಿತರೆ ಐತಿಹಾಸಿಕ ಸ್ಥಳಗಳು ಇದೆ. ಈ ನಿಟ್ಟಿನಲ್ಲಿ ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಂಗನೂರು ಹಿರಿಕೆರೆ ಅಭಿವೃದ್ಧಿಗೆ 14.50 ಕೋಟಿ ರೂ, ಅನುಮೋದನೆಯನ್ನು ನೀಡಿದ್ದಾರೆ. ಈ ಭಾಗದ ರೈತರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಎ.ಆರ್.ಕೃಷ್ಣಮೂರ್ತಿ ಅವರು ಶ್ರಮ ವಹಿಸಿದ್ದಾರೆ. ಇದರಿಂದ ಹೊಂಗನೂರು, ಮಸಣಾಪುರ, ಇರಸವಾಡಿ, ಗಂಗವಾಡಿ ಇನ್ನಿತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಅದರಂತೆ ಕ್ಷೇತ್ರದ ಯರಗಂಬಳ್ಳಿ ಎಲೆಕೆರೆ ಅಭಿವೃದ್ಧಿಗೆ ವಿಶೇಷವಾದ ಆಸಕ್ತಿಯನ್ನು ವಹಿಸಬೇಕು. ಈ ಕೆರೆಗೆ ಕಬಿನಿ ನಾಲೆಯ ಮೂಲಕ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಹೊಂಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮೋಹನ್, ಉಪಾಧ್ಯಕ್ಷ ನವೀನ್, ಮಸಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣ್ಣ, ಇರಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ್ ಕುಮಾರ್ ಹಾಜರಿದ್ದರು.