ಬೆರಳೊಕ್ಕಲಿಗರ ಪೂಜನೀಯ ಭೈರವಕ್ಷೇತ್ರ ಸೀತಿ

09-klr-0001
Published on

ಕೋಲಾರ: ಬೆರಳೊಕ್ಕಲಿಗರ ಆರಾಧನಾ ಕ್ಷೇತ್ರ, ಭೈರವೋಪಾಸನೆಗೆ ಹೆಸರಾದ ಸೀತಿ ಬೆಟ್ಟ ರಾಜ್ಯದಲ್ಲಷ್ಟೇ ಅಲ್ಲದೆ ನೆರೆಯ ಆಂಧ್ರ, ತಮಿಳುನಾಡಿನಲ್ಲೂ ಪ್ರಸಿದ್ಧಿ ಪಡೆದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾವಾಂತರ, ಚಿತ್ತೂರು, ಕೃಷ್ಣಗಿರಿ ಮತ್ತಿತರ ಭಾಗದ ಸಹಸ್ರಾರು ಕುಟುಂಬಗಳ ಮನೆ ದೇವರು ಸೀತಿ ಭೈರವೇಶ್ವರ. ಹಚ್ಚ ಹಸುರಿನಿಂದ ಕೂಡಿದ ಬಂಡೆ ಕಲ್ಲುಗಳ ನಡುವೆ ಬೆಟ್ಟದ ಮೇಲೆ ಒಂದೇ ಸಂಕೀರ್ಣದಲ್ಲಿ ಸವಾನಾಂತರವಾಗಿ ಶ್ರೀಪತೇಶ್ವರ ಮತ್ತು ಭೈರವೇಶ್ವರ ದೇವಾಲಯಗಳಿದ್ದು, ನಿತ್ಯ ನೂರಾರು ಭಕ್ತರು ಸ್ವಾಮಿಯ ದರ್ಶನಕ್ಕೆ ಆಗಮಿಸುತ್ತಾರೆ.

ಶ್ರೀಪತೇಶ್ವರ ಗರ್ಭಗುಡಿ ನೈಸರ್ಗಿಕ ಗುಹೆಯಾಗಿದ್ದು, ಇದನ್ನೇ ಕಾಲಾನಂತರದಲ್ಲಿ ದೇವಾಲಯವನ್ನಾಗಿ ವಾರ್ಪಡಿಸಲಾಗಿದೆ. ಗಂಗರ ವಾಸ್ತು ಶಿಲ್ಪ ಹೋಲುವ ಭೈರವೇಶ್ವರಮೂರ್ತಿ ಚತುರ್ಭುಜ ಹೊಂದಿದ್ದು, ಕೈಗಳಲ್ಲಿ ತ್ರಿಶೂಲ, ಪಾಶಾ ಕಪಾಲ, ಅಕ್ಷರ ವಾಲೆಗಳಿವೆ. ಪ್ರಭಾವಳಿ ವಿಶಿಷ್ಟವಾಗಿದ್ದು, ದೇವರ ಗಂಭೀರ ಮುಖಮುದ್ರೆ ಎಂತಹವರಲ್ಲೂ ಭಕ್ತಿಭಾವ ಮೂಡುವಂತೆ ವಾಡುತ್ತದೆ.

ಐತಿಹಾಸಿಕ ಭೈರವ ದೇವಾಲಯ ಹೆಸರಿಸುವ ಶಾಸನ ಗರ್ಭಗುಡಿಗೆ ಹೊಂದಿಕೊಂಡಿದ್ದು, ಪಲ್ಲವ, ಚೋಳ, ಹೊಯ್ಸಳರ ವಾಂಡಲೀಕರಾಗಿದ್ದ ತಮಿಳುಗಂಗ ರಾಜವಂಶದವರು ದೇವಾಲಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ, ವಿಜಯನಗರದ ಅರಸರ ಕಾಲದಲ್ಲೂ ದೇವಾಲಯಕ್ಕೆ ದಾನ ನೀಡಿದ ಉದಾಹರಣೆಗಳಿವೆ.

ದೇವಾಲಯ ಹೊರಭಾಗ ದಟ್ಟ ಗಿಡ ಬಳ್ಳಿಗಳಿಂದ ಆವರಿಸಿಕೊಂಡಿದೆ. ಬಾಗಿಲ ಅಂಚಿನ ಮೇಲೆ ಗಮನ ಸೆಳೆಯುವ ಶಿಲ್ಪಗಳಿದ್ದು, ಹೊಯ್ಸಳ ಕಲಾಕೃತಿಗಳ ಅನುಕರಣೆಯಂತೆ ಕಾಣುತ್ತವೆ. ದೇಗುಲದಲ್ಲಿ ಎರಡು ಭಾಗಗಳಿದ್ದು, ಶ್ರೀಪತೇಶ್ವರ ಗುಡಿಯ ಒಂದು ಬದಿಯಲ್ಲಿ ಗಣಪತಿ, ವೀರಭದ್ರ, ಮಹಿಷ ಮರ್ಧಿನಿ ಗುಡಿಗಳಿದ್ದರೆ, ಮತ್ತೊಂದು ಬದಿ ಪಾರ್ವತಿದೇವಿ ಮತ್ತು ಸುಬ್ರಹ್ಮಣ್ಯ ದೇವರ ಗುಡಿಗಳಿವೆ. ಬೆಟ್ಟದ ಕೆಳಗೆ ವೇಣುಗೋಪಾಲಸ್ವಾಮಿ ಮತ್ತು ಗ್ರಾಮದೇವತೆ ಗುಡಿಗಳಿವೆ.

ಭಸ್ಮಾಸುರ ಭಸ್ಮವಾಗಿದ್ದು ಇಲ್ಲೇ: ಬೆರಳು ಕೊಡುವ ಪದ್ಧತಿ ಆಚರಣೆಗೆ ಬಂದಿದ್ದು, ಕೃತಯುಗದ ಭಸ್ಮಾಸುರ ಪುರಾಣದೊಂದಿಗೆ ಬೆಸೆದುಕೊಳ್ಳುತ್ತದೆ. ಒಮ್ಮೆ ಭಸ್ಮಾಸುರ ೋರ ತಪಸ್ಸನ್ನಾಚರಿಸಿದ್ದು, ಪ್ರತ್ಯಕ್ಷನಾದ ಶಿವನ ಎದುರು ತಾನು ಯಾರ ತಲೆ ಮೇಲೆ ಕೈ ಇಟ್ಟರೆ ಅವರು ಭಸ್ಮವಾಗಬೇಕು ಎಂಬ ವರ ಪಡೆಯುತ್ತಾನೆ. ಆಗ ಶಿವನಿದ್ದರೆ ಮತ್ತೊಬ್ಬರಿಗೆ ಇಂತಹ ವರ ಕೊಡಬಹುದೆಂದು ಭಾವಿಸಿ ಶಿವನ ತಲೆ ಮೇಲೇ ಕೈ ಇಡಲು ಹೋಗುತ್ತಾನೆ. ಇದರಿಂದ ವಿಚಲಿತನಾದ ಶಿವ ಅಲ್ಲಿಂದ ತಪ್ಪಿಸಿಕೊಂಡು ಸೀತಿ ಬೆಟ್ಟದ ಗುಹೆಯಲ್ಲಿ ಅಡಗಿಕೊಳ್ಳುತ್ತಾನೆ. ಆಗ ಅಲ್ಲಿಗೆ ಬಂದ ಭಸ್ಮಾಸುರ ಇತ್ತ ಯಾರಾದರೂ ಬಂದರೇ ಎಂದು ಭೂಮಿ ಉಳುಮೆಯಲ್ಲಿ ತೊಡಗಿದ್ದ ರೈತನನ್ನು ಕೇಳುತ್ತಾನೆ. ರೈತ ತನ್ನ ತೋರು ಬೆರಳಿಂದ ಶಿವನಿದ್ದ ಗುಹೆ ಕಡೆ ಹೋಗೆಂದು ತಿಳಿಸುತ್ತಾನೆ. ಭಸ್ಮಾಸುರ ಶಿವನ ಬಳಿ ತೆರಳುತ್ತಿದ್ದುದನ್ನು ಅರಿತ ಶ್ರೀಮನ್ನಾರಾಯಣ ಮೋಹಿನಿ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಮೋಹಿನಿ ಸೌಂದರ್ಯಕ್ಕೆ ಮನಸೋತ ಭಸ್ಮಾಸುರ ತನ್ನನ್ನು ವರಿಸುವಂತೆ ಕೇಳಿದಾಗ, ತಾನು ನಾಟ್ಯ ವಾಡಿದಂತೆ ನೀನೂ ವಾಡಿದರೆ ವರಿಸುತ್ತೇನೆ ಎನ್ನುತ್ತಾಳೆ. ನಾಟ್ಯ ವಾಡುತ್ತ ಮೋಹಿನಿ ತನ್ನ ಕೈಯನ್ನು ತಲೆ ಮೇಲೆ ಇಟ್ಟುಕೊಂಡಾಗ ಭಸ್ಮಾಸುರನೂ ಹಾಗೆಯೇ ವಾಡಿ ಭಸ್ಮವಾಗಿಹೋಗುತ್ತಾನೆ. ಭೈರವೇಶ್ವರ ದೇವಾಲಯದ ಎದುರಿಗೆ ಭಸ್ಮಾಸುರ ಭಸ್ಮವಾಗಿ ಅದು ರಾಶಿಬಿದ್ದಿರುವ ಬೆಟ್ಟ ಈಗಲೂ ಕಾಣಬಹುದು ಎಂದು ಆಸ್ತಿಕರು ಹೇಳುತ್ತಾರೆ. ತಾನು ಅಡಗಿದ್ದ ಸ್ಥಳ ಭಸ್ಮಾಸುರನಿಗೆ ತೋರಿಸಿದ್ದರಿಂದ ರೈತನಿಗೆ ಶಾಪ ಕೊಟ್ಟ ಶಿವ, ನಿನ್ನ ಬೆರಳು ಕತ್ತರಿಸಿ ಹೋಗಲಿ ಎನ್ನುತ್ತಾನೆ. ಇದರಿಂದ ಆತಂಕಗೊಂಡ ರೈತ ಮುಂದೆ ತನ್ನ ವಂಶಿಕರಿಗೆ ತೊಂದರೆಯಾಗದಿರಲೆಂದು ಭೈರವೇಶ್ವರನಲ್ಲಿ ಪ್ರಾರ್ಥಿಸಿದಾಗ ಬೆರಳು ಕತ್ತರಿಸಿ ನೈವೇದ್ಯ ನೀಡಿ ಶಿವನ ಅನುಗ್ರಹ ಹೊಂದುವಂತೆ ತಿಳಿಸಿದ್ದು, ಅದು ಮುಂದೆ ಅವ್ಯಾಹತವಾಗಿ ನಡೆದು ಬಂದಿತು ಎನ್ನಲಾಗುತ್ತಿದೆ.

ಇಲ್ಲಿನ ವೈಶಿಷ್ಯ: ಭೈರವೇಶ್ವರನಿಗೆ ಭಕ್ತರು ತಮ್ಮ ಕೈ ತೋರು ಬೆರಳನ್ನು ಕೊಡುವ ಪದ್ಧತಿ ನಾಡಪ್ರಭು ಕೆಂಪೇಗೌಡರ ಕಾಲದ ತನಕ ಪ್ರಚಲಿತದಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಇದಕ್ಕೆ ನಿರ್ಬಂಧ ಹೇರಿದ್ದರಿಂದ ಬೆರಳಿಗೆ ಹೂವು ಸುತ್ತಿ ಅದನ್ನು ಕತ್ತರಿಸಿ ದೇವರಿಗೆ ಅರ್ಪಿಸುವ ಪದ್ಧತಿ ನಡೆದುಕೊಂಡು ಬರುತ್ತಿದೆ.

ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳು: ಸೀತಿ ಭೈರವೇಶ್ವರ ದೇಗುಲದಲ್ಲಿ ಚೈತ್ರ ಶುದ್ಧ ಪೌರ್ಣಮಿಯಂದು ರಥೋತ್ಸವ ನಡೆಯುತ್ತದೆ. ಮಹಾ ಶಿವರಾತ್ರಿಯಲ್ಲಿ ನಾಲ್ಕು ದಿನ ವಿಶೇಷ ಪೂಜೆಗಳು, ಕಾರ್ತಿಕ, ಶ್ರಾವಣ ವಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರತಿ ಶನಿವಾರ, ಸೋಮವಾರ ದೇವರಿಗೆ ಪಂಚಾಮೃತಾಭಿಷೇಕ ನೆರವೇರುತ್ತದೆ. ವೈಶಾಖ ಪೂರ್ತಿ ಒಕ್ಕಲಿಗರ ಬಂಡಿದ್ಯಾವರಗಳನ್ನು ವಿಜಂಭಣೆಯಿಂದ ಆಚರಿಸಲಾಗುತ್ತದೆ. ಸಹಸ್ರಾರು ಮಂದಿ ಭಾಗವಹಿಸುತ್ತಾರೆ.

ಹೀಗೆ ತಲುಪಬಹುದು: ಕೋಲಾರದಿಂದ 18 ಕಿಮೀ ದೂರದಲ್ಲಿ ಸೀತಿ ಬೆಟ್ಟವಿದೆ. ಬೆಂಗಳೂರಿನಿಂದ 70 ಕಿಮೀ ದೂರವಿದೆ. ಬೆಂಗಳೂರು ಕೋಲಾರ ಕಡೆಯಿಂದ ನರಸಾಪುರ ಬಳಿ ತಿರುವು ಪಡೆದು, ವೇಮಗಲ್‌ನಿಂದ ಕ್ಷೇತ್ರ ತಲುಪಬಹುದು. ಕೋಲಾರದಿಂದ ಇಲ್ಲಿಗೆ ತಲುಪಲು ಬಸ್ ಸೌಕರ್ಯವಿದೆ. ಚಿಕ್ಕಬಳ್ಳಾಪುರ, ದೇವನಹಳ್ಳಿ ಕಡೆಯಿಂದ ಬಂದರೆ ಕೋಲಾರ ವಾರ್ಗದಲ್ಲಿ ವೇಮಗಲ್ ಬಳಿ ತಿರುವು ಪಡೆದು ಸೀತಿ ತಲುಪಬಹುದು.

ಸೀತಿ ಬೈರವೇಶ್ವರ ಕ್ಷೇತ್ರದಲ್ಲಿ ನಿತ್ಯ ಬೆಳಗ್ಗೆ 7.30ರಿಂದ ಸಂಜೆ 4ರವರೆಗೂ ಪೂಜೆ ನಡೆಯುತ್ತದೆ. ಬೆಳಗ್ಗೆ 7.30ರಿಂದ 9 ರೊಳಗೆ ಅಭಿಷೇಕ ನೆರವೇರುತ್ತದೆ. ಈ ಅವಧಿಯಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವೆಂಕಟೇಶ್, ಪಾರುಪತ್ತೇದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net