

ಹುಬ್ಬಳ್ಳಿ : ಎರಡು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದ ಬೆಣ್ಣೆ ಹಳ್ಳದಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ನೀರು ಬಂದಿದ್ದರಿಂದ ತಾಲೂಕಿನ ಇಂಗಳಹಳ್ಳಿ ಗ್ರಾಮ ಸಮೀಪದ ಹೊಲದಲ್ಲಿ ಸಿಲುಕಿದ್ದ 29 ಜನರನ್ನು ರಕ್ಷಿಸಿರುವ ತಾಲೂಕು ಆಡಳಿತ, ಅದೇ ಗ್ರಾಮದ ಇನ್ನೊಂದೆಡೆ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಯುವಕನಿಗಾಗಿ ರಕ್ಷಣಾ ಕಾರ್ಯ ಮುಂದುವರಿಸಿದೆ.
ಸೋಮವಾರದಂದು ಇಂಗಳಹಳ್ಳಿ ಗ್ರಾಮದಲ್ಲಿ ಕಲ್ಲು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಬ್ಯಾಹಟ್ಟಿ ಗ್ರಾಮದ ನಾಲ್ವರು, ಇಂಗಳಳ್ಳಿ - ಕುಸುಗಲ್ ಮಧ್ಯದ ಹಳ್ಳ ದಾಟಲು ಮುಂದಾಗಿದ್ದರು. ಹಳ್ಳ ದಾಟದಂತೆ ಸ್ಥಳದಲ್ಲಿದ್ದ ಜನರು ಎಷ್ಟೇ ಹೇಳಿದರೂ ಕೇಳದ ನಾಲ್ವರು ಯುವಕರು ಹಳ್ಳಕ್ಕೆ ಇಳಿದಿದ್ದಾರೆ. ನೀರಿನ ರಭಸಕ್ಕೆ ಬ್ಯಾಹಟ್ಟಿ ಗ್ರಾಮದ ಆನಂದ ಹಿರೇಗೌಡರ (24) ಎಂಬ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮತ್ತೊಬ್ಬ ಯುವಕ, ಹಳ್ಳದ ದಂಡೆ ಪಕ್ಕದ ಗಿಡ ಹಿಡಿದುಕೊಂಡಿದ್ದು, ಆತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನುಳಿದ ಇಬ್ಬರು ಸುರಕ್ಷಿತವಾಗಿ ಹಳ್ಳ ದಾಟಿದ್ದಾರೆ. ಹಳ್ಳದಲ್ಲಿ ತೇಲಿ ಹೋಗಿರುವ ಆನಂದ ಹಿರೇಗೌಡರನನ್ನು ಹುಡುಕುವ ಕಾರ್ಯಾಚರಣೆ ತಡರಾತ್ರಿಯವರೆತಗೂ ಮುಂದುವರೆದಿತ್ತು.
ಮತ್ತೊಂದು ಘಟನೆಯಲ್ಲಿ ಗ್ರಾಮದ ಪಕ್ಕದ ಹೊಲದಲ್ಲಿ 28 ಜನ ಜನರು ಕೂಲಿ ಕೆಲಸದಲ್ಲಿ ತೊಡಗಿದ್ದರು. ಹೊಲದ ಸುತ್ತಲೂ ಹಳ್ಳ ಇದ್ದು, ಮಧ್ಯಾಹ್ನ ಸುಮಾರು 1.30ಕ್ಕೆ ಹಳ್ಳದಲ್ಲಿ ಏಕಾಏಕಿ ನೀರು ಬಂದಿದೆ. ಮಾಹಿತಿ ತಿಳಿದಿ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಘಟನೆ ಸ್ಥಳಕ್ಕೆ ತೆರಳಿದ್ದಾರೆ. ಸ್ಥಳಕ್ಕೆ 2 ಬೋಟ್‌ಗಳನ್ನು ತರಿಸಿ, ರಾತ್ರಿಯವರೆಗೆ ಎಲ್ಲ 28 ಜನ ಕೂಲಿ ಕಾರ್ಮಿಕರು ಹಾಗೂ ಹೊಲದ ಮಾಲೀಕ ಸೇರಿ ಒಟ್ಟು 29 ಜನರನ್ನು ರಕ್ಷಿಸಿದ್ದಾರೆ.
ಜವಳಿ, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇಂಗಳಹಳ್ಳಿಗೆ ಭೇಟಿ ನೀಡಿ, ರಕ್ಷಣಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಮುನೇನಕೊಪ್ಪ, ಈ ಹಿಂದೆಯೂ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದಿಂದಾಗಿ ಈ ಭಾಗದ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಹಳ್ಳಗಳಿಗೆ ಶಾಶ್ವತ ಪರಿಹಾರ ದೊರಕಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಹಳ್ಳದಲ್ಲಿ ಕೊಚ್ಚಿ ಹೋಗಿರುವ ಯುವಕನ ಪತ್ತೆ ಮಾಡುವ ಕಾರ್ಯಾಚರಣೆ ಮಂಗಳವಾರ ಮುಂದುವರಿಯಲಿದೆ ಎಂದು ತಿಳಿಸಿದರು.