

ಚಿತ್ರದುರ್ಗ: ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗಾಗಿ ರಾಜ್ಯದೆಲ್ಲ ಸಾಮಾಜಿಕ, ಪ್ರಗತಿಪರ ಚಿಂತಕರೆಲ್ಲರೂ ಒಗ್ಗೂಡಿ ರಾಜ್ಯಮಟ್ಟದ ಚಿಂತನಾ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುತ್ತಿದ್ದು, ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದೆ ಎಂದು ಸಾಮಾಜಿಕ ಚಿಂತಕ ಪ್ರೊ.ಸಿ.ಕೆ.ಮಹೇಶ್ ತಿಳಿಸಿದರು.
ಮಾನವ ಬಂಧುತ್ವ ವೇದಿಕೆ 10ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಸಲು ತೀರ್ಮಾನಿಸಿರುವ ಸಮ್ಮೇಳನದ ಕುರಿತು ಚರ್ಚಿಸಲು ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರು ತಮ್ಮ ಅಮೂಲ್ಯ ಮತಗಳ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ, ಮುಂದೊಂದು ದಿನ ಭಾರತ ಬಂಡವಾಳಶಾಹಿ, ಶ್ರೀಮಂತರ ಆಳ್ವಿಕೆಗೆ ಒಳಪಡುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಪ್ರಜಾಪ್ರಭುತ್ವವನ್ನು ಅಪಾಯದಿಂದ ತಪ್ಪಿಸಲು ಆಮಿಷಕ್ಕೆ ಒಳಗಾಗದೆ, ಮತಾಂದೋಲನ ಕುರಿತು ಬೃಹತ್ ಜಾಗೃತಿಯಾಗಬೇಕಿದೆ ಎಂದು ಸಲಹೆ ನೀಡಿದರು.
ಭಾರತಕ್ಕೆ ಉತ್ತಮ ಸಂವಿಧಾನ ಕೊಡುಗೆಯಾಗಿ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಬುದ್ಧನ ಆಲೋಚನೆಯನ್ನೇ ಪ್ರಧಾನವಾಗಿಟ್ಟುಕೊಂಡರು. ಮೌಢ್ಯ, ಅಸ್ಪಶ್ಯತೆ, ಶ್ರೀಮಂತರ ದಬ್ಬಾಳಿಕೆ ವಿರುದ್ಧ ಹೋರಾಡಲು ಸ್ಪೂರ್ತಿಯಾದರು. ಹೀಗಾಗಿ ಬಹುಸಂಖ್ಯಾತರು ಜಾಗೃತರಾಗದಿದ್ದರೆ, ಸಂವಿಧಾನ ಜಾಗವನ್ನು ಮನುಧರ್ಮ ಅಲಂಕರಿಸಲಿದೆ ಎಂದು ಎಚ್ಚರಿಸಿದರು.
ನಿವೃತ್ತ ಪ್ರಾಚಾರ್ಯ ಡಾ.ವಿ.ಬಸವರಾಜ್ ಮಾತನಾಡಿ, ವೇದಿಕೆ ಶೋಷಿತ ಸಮುದಾಯಗಳ ಮೂಲ ಹಕ್ಕುಗಳ ರಕ್ಷಿಸುವುದರ ಜೊತೆಗೆ ಸಾಮರಸ್ಯ ಮೂಡಿಸಲು ಪ್ರಯತ್ನಿಸುತ್ತಿದೆ. ಯಾವ ಕಾರಣಕ್ಕೂ ವ್ಯಕ್ತಿ, ಒಂದು ಸಮಾಜವನ್ನು ಓಲೈಸುವ ಕೆಲಸ ಆಗಬಾರದು. ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಸಂಘಟನೆಯಾಗಲಿ ಎಂದು ಆಶಿಸಿದರು.
ಸೃಷ್ಠಿಸಾಗರ ಪ್ರಕಾಶನದ ಮೇಘ ಗಂಗಾಧರನಾಯ್ಕ ಮಾತನಾಡಿ, ಸಾಮಾಜಿಕವಾಗಿ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ರಾಜ್ಯದ ಪ್ರತಿ ಜಿಲ್ಲೆಯ ಚಿಂತಕರು, ಬರಹಗಾರರು, ಪ್ರಬುದ್ಧರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಶೋಷಿತರನ್ನು ಎಚ್ಚರಿಸಲು ವೇದಿಕೆ ಪ್ರಯತ್ನ ಇದಾಗಿದೆ ಎಂದರು.
ಬಸವರಾಜ್, ಶಿವಕುಮಾರ್, ಎಚ್.ಅಂಜಿನಪ್ಪ, ಆರ್.ವಿಶ್ವಸಾಗರ್ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.