

ನವಲಗುಂದ: ಬೆಳಗಾವಿ ಜಿಲ್ಲೆ ಕಿತ್ತೂರ ಸುತ್ತಮುತ್ತ ಭಾರಿ ಮಳೆಯಾದ ಪರಿಣಾಮ ಪ್ರವಾಹ ಉಂಟಾಗಿ ಬೆಣ್ಣಿಹಳ್ಳದಲ್ಲಿ ಸಿಲುಕಿದ್ದ ನವಲಗುಂದ ತಾಲೂಕಿನ ಗುಡಿಸಾಗರ, ಸೊಟಕನಾಳ ಹಾಗೂ ಕೊಂಗವಾಡ ಗ್ರಾಮಗಳ 13 ಜನರನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.
ಗುಡಿಸಾಗರ ಗ್ರಾಮದ ಶರಣಪ್ಪ ಮೇಟಿ, ಗಂಗವ್ವ ಕಡೇಮನಿ, ಬೀರಪ್ಪ ಪೂಜಾರ ಎಂಬುವವರು ಸೋಮವಾರ ಬೆಳಗ್ಗೆ ಹೊಲಕ್ಕೆ ತೆರಳಿದ್ದರು. ಸಂಜೆ ವಾಪಸಾಗುವಾಗ ಬೆಣ್ಣಿಹಳ್ಳದಲ್ಲಿ ಸಿಲುಕಿದ್ದರು. ಅಧಿಕಾರಿಗಳಿಗೆ ಮಾಹಿತಿ ತಲುಪಿ ರಕ್ಷಣೆ ಕಾರ್ಯಾಚಾರಣೆಗೆ ಮುಂದಾಗಿದ್ದರಾದರೂ ಕತ್ತಲು ಆವರಿಸಿದ್ದರಿಂದ ಕೊಂಚ ಅಡಚಣೆಯಾಗಿತ್ತು. ರಾತ್ರಿ 1ಗಂಟೆಗೆ ಅಣ್ಣಿಗೇರಿ ಮತ್ತು ಅಮರಗೋಳ ಅಗ್ನಿಶಾಮಕ ದಳದಿಂದ ಬೋಟ್ ತರಿಸಿ ಮೂವರನ್ನು ರಕ್ಷಿಸಲಾಗಿದೆ.
ಅದರಂತೆ ಪಕ್ಕದ ಸೊಟಕನಾಳ ಗ್ರಾಮದ ಒಂದೇ ಕುಟುಂಬದ ಕಲ್ಲಪ್ಪ ಹಡಪದ, ನವೀನ ಹಡಪದ, ರವಿ ಹಡಪದ, ಚನ್ನವ್ವ ಹಡಪದ, ಶೇಕವ್ವ ಹಡಪದ ಹಾಗೂ ಕೊಂಗವಾಡದ ಶರಣಪ್ಪ ಜವಳಿ, ಮುದಕಪ್ಪ ಜವಳಿ, ಸಿದ್ದಲಿಂಗಪ್ಪ ತಳವಾರ, ಭೀಮಪ್ಪ ಜಕ್ಕಣ್ಣವರ, ಕುಮಾರ ಸುರಕೋಡ ಎಂಬುವವರು ಬೆಣ್ಣಿಹಳ್ಳದಲ್ಲಿ ಸಿಲಿಕಿದ್ದಾರೆಂದು ಮಂಗಳವಾರ ಬೆಳಗ್ಗೆ ಗೊತ್ತಾಗಿದೆ. ಸುದ್ದಿ ತಿಳಿದು ಅಧಿಕಾರಿಗಳು ಎರಡೂ ಕಡೆ ತೀವ್ರ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್ಪಿ ವರ್ತಿಕಾ ಕಟಿಯಾರ, ತಹಸೀಲ್ದಾರ್ ನವೀನ ಹುಲ್ಲೂರ, ಸಿಪಿಐ ಸಿ. ಜಿ. ಮಠಪತಿ, ಜಯಪಾಲ ಪಾಟೀಲ, ಗ್ರಾಪಂ ಅಧಿಕಾರಿಗಳು ಇದ್ದರು.