

ನವಲಗುಂದ: ಪ್ರತಿವರ್ಷ ಮಳೆಗಾಲದಲ್ಲಿ ಬೆಣ್ಣಿಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಕಂಡು ಬರುತ್ತಿದ್ದು, ಇದರಿಂದ ಈ ಭಾಗದಲ್ಲಿ ಜನರು ಭಯ, ಭೀತಿಗೊಳ್ಳುವಂತಾಗಿದೆ. ಅದಕ್ಕಾಗಿ ಈ ಬಾರಿ ಜಿಲ್ಲಾಡಳಿತ ಕೆಲವು ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರವಾಹ ವಿಪತ್ತು ನಿರ್ವಹಣೆಗೆ ಸನ್ನದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ತಾಲೂಕಿನ ಯಮನೂರ ಗ್ರಾಮದ ಬಳಿ ಭಾನುವಾರ ಬೆಣ್ಣಿಹಳ್ಳದ ಸೇತುವೆ ಕೆಳಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾಡಳಿತ ನೇತೃತ್ವದಲ್ಲಿ ಎನ್ಡಿಆರ್ಎಫ್ ತಂಡ ನಡೆಸಿದ ಪ್ರವಾಹದಲ್ಲಿ ಸಿಲುಕಿದ ರೈತರನ್ನು ರಕ್ಷಿಸುವ ಪ್ರಾಯೋಗಿಕ ಕಾರ್ಯಾಚರಣೆ ವೀಕ್ಷಿಸಿ ಅವರು ಮಾತನಾಡಿದರು.
ಎರಡು ದಿನಗಳ ಹಿಂದೆ ಬೆಣ್ಣಿಹಳ್ಳದಲ್ಲಿ ಪ್ರವಾಹ ಕಾಣಿಸಿಕೊಂಡು ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಕಳೆದ ವರ್ಷವೂ ಭಾರಿ ಪ್ರಮಾಣದಲ್ಲಿ ಪ್ರವಾಹ ಬಂದಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮತ್ತು ಮನೆಗಳು ಕುಸಿದು ಬಿದ್ದಿದ್ದವು. ಕೆಲವು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ ಜನ, ಜಾನುವಾರು ಸ್ಥಳಾಂತರಗೊಳಿಸಲಾಗಿತ್ತು. ಆದ್ದರಿಂದ ಈ ಬಾರಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದ್ದು, ನವಲಗುಂದದಲ್ಲಿ ವಿಶೇಷ ಎನ್ಡಿಆರ್ಎಫ್ ತಂಡ ರಚಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ 200 ಸ್ವಯಂಸೇವಕರು ಎನ್ಡಿಆರ್ಎಫ್ ತಂಡದ ಜೊತೆ ಕೈಜೋಡಿಸಿದೆ. ಎಲ್ಲವನ್ನೂ ಸರ್ಕಾರದಿಂದಲೇ ಮಾಡಲು ಸಾಧ್ಯವಿಲ್ಲ. ಸಂಘ, ಸಂಸ್ಥೆಗಳ ಹಾಗೂ ಜನಸಾಮಾನ್ಯರ ಸಹಕಾರದಿಂದ ಪರಿಹಾರ ಕಾಣಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಸಂಪೂರ್ಣ ದಾಸ್ತಾನಿದೆ. ಮಧ್ಯವರ್ತಿಗಳು ಬ್ಲಾಕ್ನಲ್ಲಿ ಮಾರಾಟ ಮಾಡುತ್ತಿದ್ದರೆ, ಅಂಥವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಬಿ. ದಾನಪ್ಪಗೌಡ್ರ, ಮಹಾಂತೇಶ ಕಲಾಲ, ಸುಭಾಸ ಗಾಳಪ್ಪನವರ, ಜಯಪ್ರಕಾಶ ಬದಾಮಿ, ಮಲ್ಲಿಕಾರ್ಜುನಗೌಡ ಸಂಗನಗೌಡ್ರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಅತಿವೃಷ್ಟಿ ನೋಡಲ್ ಅಧಿಕಾರಿ ಸದಾಶಿವ ಮರ್ಜಿ, ತಹಸೀಲ್ದಾರ್ ನವೀನ ಹುಲ್ಲೂರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ವಿವೇಕ ಪಾಯಸ್, ಜಿಲ್ಲಾ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ತಾಪಂ ಪ್ರಭಾರ ಇಒ ಕೃಷ್ಣಮೂರ್ತಿ ಚಾಟೆ, ಸಿಪಿಐ ಜಿ.ಸಿ. ಮಠಪತಿ, ಕೃಷಿ ನಿರ್ದೇಶಕ ಶ್ರೀನಾಥ ಜಮ್ಮಲಗಿ ಇತರರಿದ್ದರು.
ಪ್ರವಾಹದ ನೀರು ತಡೆದು ರೈತರಿಗೆ ಸದ್ಬಳಕೆ
ಈ ಭಾಗದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಧಾರವಾಡ ಶಾಸಕ ಅಮೃತ ದೇಸಾಯಿ ಒತ್ತಾಯದಿಂದ ಈಗಾಗಲೇ ತುಪ್ಪರಿಹಳ್ಳದ ಪ್ರವಾಹದ ನೀರನ್ನು ತಡೆದು, ರೈತರ ಹೊಲ, ಗದ್ದೆಗಳಿಗೆ ನೀರು ನುಗ್ಗದಂತೆ ಮಾಡಲಾಗಿದೆ. ರೈತರ ಹೊಲಗಳಿಗೆ ನೀರನ್ನು ಸದ್ಬಳಕೆ ಮಾಡಲು ಹೊಸ ಅಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದೇವೆ. ಈಗಾಗಲೇ ಡ್ರೋನ್ ಕ್ಯಾಮರಾ ಮೂಲಕ ಸರ್ವೆ ನಡೆಸಿ ಮುಖ್ಯಮಂತ್ರಿಗೆ ಯೋಜನಾ ವರದಿ ಸಲ್ಲಿಸಿದ್ದೇವೆ. ಅದರಂತೆ, ಬೆಣ್ಣಿಹಳ್ಳದ ಅಭಿವೃದ್ಧಿ ಯೋಜನೆಗೆ ಕ್ರಮ ಕೈಗೊಂಡಿದ್ದೇವೆ ಎಂದರು. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ರೈತ ಹೋರಾಟಗಾರರಿಗೆ ಸರ್ಕಾರ ಸಹಕಾರ ನೀಡುತ್ತ ಬಂದಿದ್ದು, ಆದಷ್ಟು ಬೇಗನೆ ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವ ಶೆಟ್ಟರ್ ತಿಳಿಸಿದರು.