

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ಬೆಣಚಿಗೆರೆ ಗ್ರಾಮದ ರೈತರ ಜಮೀನಿನಲ್ಲಿ ಹೊಯ್ಸಳರ ಕಾಲದ ಶಾಸನ ಪತ್ತೆಯಾಗಿದೆ.
ಕಾಂತರಾಜು ಹಾಗೂ ಸಿದ್ದಲಿಂಗಯ್ಯ ಅವರ ತೋಟದ ಮಧ್ಯದ ಬದುವಿನಲ್ಲಿ ಪತ್ತೆಯಾಗಿದ್ದು, ಹೊಯ್ಸಳರ ದೊರೆ ವಿಷ್ಣುವರ್ಧನನ ಪತ್ನಿ ಬ್ರಹ್ಮಲಾದೇವಿ ಗ್ರಾಮವನ್ನು ದತ್ತು ನೀಡಿರುವ ಬಗ್ಗೆ ಮತ್ತು ಗ್ರಾಮವು ದತ್ತಿ ಗ್ರಾಮವಾಗಿದ್ದು, ಗ್ರಾಮದಲ್ಲಿ ಈ ಹಿಂದೆ ಬ್ರಹ್ಮೇಶ್ವರ ದೇವಾಲಯ ಹಾಗೂ ಕಲ್ಯಾಣಿ ಇತ್ತು ಎಂಬ ಸುಳಿವು ಶಾಸನದಲ್ಲಿದೆ ಎಂದು ಸ್ಥಳಿಯ ಶಾಸನ ತಜ್ಞರು ತಿಳಿಸಿದ್ದಾರೆ.
ಮಣ್ಣಿನಲ್ಲಿ ಹುದುಗಿದ್ದ ಈ ಶಾಸನವಿದ್ದ ಜಾಗವನ್ನು ಜಮೀನಿನ ಮಾಲೀಕರು ನಿಧಿ ಇದೆ ಎಂದು ಭಾವಿಸಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಗ್ರಾಮದ ಪ್ರಗತಿಪರ ಚಿಂತಕರು ಜಾಗವನ್ನು ಪರಿಶೀಲನೆ ಮಾಡಲು ನಿರ್ಧರಿಸಿ, ಶುಕ್ರವಾರ ಗ್ರಾಮದ ಹಲವರನ್ನು ಸೇರಿಸಿಕೊಂಡು ಜಮೀನಿನ ಮಾಲೀಕರನ್ನು ಒಲೈಸಿ ಆತಂಕದಲ್ಲಿಯೇ ಜೆಸಿಬಿಯಿಂದ ಮಣ್ಣನ್ನು ತೆಗೆದಾಗ ಶಾಸನ ಪತ್ತೆಯಾಗಿದೆ. ಪ್ರಾಚ್ಯ ತಜ್ಞರಿಂದ ಪರಿಶೀಲನೆ ನಡೆಸುವ ಉದ್ದೇಶದಿಂದ ಶಾಸನವನ್ನು ಸ್ವಚ್ಛಗೊಳಿಸಿ ಗ್ರಾಮಸ್ಥರು ಸಂರಕ್ಷಿಸಿದ್ದಾರೆ. ಶಾಸನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಹೆಚ್ಚಿನ ವಿಚಾರಗಳು ತಿಳಿಯಬಹುದು. ಇದರಿಂದ ಗ್ರಾಮಕ್ಕೆ ಇರುವ ಐತಿಹಾಸಿಕ ಹಿನ್ನೆಲೆ ತಿಳಿಯಲಿದೆ ಎಂಬ ಕುತೂಹಲದಲ್ಲಿ ಗ್ರಾಮಸ್ಥರು ಇದ್ದಾರೆ.