ಬೆಡ್ ಸಿಗದೆ ಸೋಂಕಿತರ ಪರದಾಟ

3 BGV jaggu 2A-Web
ಸೋಂಕಿತರ ಜತೆ ಆರೋಗ್ಯವಂತರನ್ನೂ ಆಂಬುಲೆನ್ಸ್‌ನಲ್ಲಿ ಕೂರಿಸಿರುವುದು.
Published on

ಬೆಳಗಾವಿ: ಇಲ್ಲಿಯ ಬಿಮ್ಸ್ (ಜಿಲ್ಲಾಸ್ಪತ್ರೆ)ನಲ್ಲಿ ಬೆಡ್‌ಗಳ ಕೊರತೆಯಾಗಿದ್ದು, ಕರೊನಾ ಸೋಂಕಿತರು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಕರೊನಾ ಸೋಂಕಿತರಿಗೆ ಅಗತ್ಯ ಬೆಡ್ ವ್ಯವಸ್ಥೆ ಮಾಡಿದ್ದಾಗಿ ಹೇಳುತ್ತಿದೆಯಾದರೂ ವಾಸ್ತವ ಬೇರೆ ರೀತಿಯೇ ಇದೆ.

ಬಿಮ್ಸ್‌ನಲ್ಲಿ ಕರೊನಾ ಚಿಕಿತ್ಸೆಗೆಂದು 300 ಬೆಡ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಪ್ರತಿ ದಿನವೂ 500ಕ್ಕಿಂತ ಹೆಚ್ಚು ಜನರು ಕರೊನಾ ಸೋಂಕಿಗೆ ತುತ್ತಾಗಿ ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಆದರೆ, ಬೆಡ್ ಕೊರತೆಯಿಂದಾಗಿ ದಿನವೂ 200ಕ್ಕೂ ಅಧಿಕ ಜನರು ಚಿಕಿತ್ಸೆಗೂ ಕ್ಯೂ ನಿಲ್ಲುವಂತಾಗಿದೆ. ಪರಿಸ್ಥಿತಿ ಎಷ್ಟು ಹೀನಾಯ ಹಂತ ತಲುಪುತ್ತಿದೆಯೆಂದರೆ, ಹೊಸ ಕರೊನಾ ಪೀಡಿತರು ಚಿಕಿತ್ಸೆಗಾಗಿ ಬೆಡ್ ಪಡೆಯಲು ಕೆಟ್ಟ ಆಶಯ ಮಾಡುವಂತಾಗಿದೆ. ಆಸ್ಪತ್ರೆಯೊಳಗೆ ಚಿಕಿತ್ಸೆಗೆ ಪಡೆಯುತ್ತಿರುವ ಯಾರಾದರೂ ಸೋಂಕಿತರು ಬೇಗನೆ ಮೃತಪಡಲಿ ಎಂದು ಬಯಸುವಂತಾಗಿದೆ. ಏಕೆಂದರೆ, ಯಾರಾದರೂ ಮೃತಪಟ್ಟರೆ ಮಾತ್ರ ಇವರಿಗೆ ಬೆಡ್ ಸಿಗುವ ಸಂದರ್ಭ ಬಂದೊದಗುತ್ತಿದೆ.

ಬೆಡ್ ಸಿಗದೆ ಸುಸ್ತು: ಕರೊನಾ ಸೋಂಕಿತನೋರ್ವ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ, ಬಳಿಕ ತನ್ನ ವೃದ್ಧ ತಾಯಿಗೆ ಮತ್ತು ತನಗೆ ಬೆಡ್ ಸೌಲಭ್ಯ ಪಡೆಯಲು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ 2 ಗಂಟೆಗೂ ಅಧಿಕ ಕಾಲ ಕಾದು ಕುಳಿತ ಘಟನೆಯೂ ಸೋಮವಾರ ಸಂಭವಿಸಿತು. ಕರೊನಾ ಸೋಂಕಿಗೆ ಒಳಗಾಗಿದ್ದ ಆತ, ಪತ್ನಿ, ತಾಯಿಯೊಂದಿಗೆ ಬಿಮ್ಸ್ ಆಸ್ಪತ್ರೆಗೆ ಬಂದಿದ್ದ. ಅದ್ಹೇಗೋ ಪತ್ನಿಗೆ ಬೆಡ್ ದೊರೆತಿದೆ. ಆದರೆ, ತಾಯಿ ಹಾಗೂ ಆತನಿಗೆ ಬೆಡ್ ಸಿಗಲಿಲ್ಲ. ಗಂಟೆಗಳ ಕಾಲ ಕಾಯ್ದು ಸುಸ್ತಾಗಿದ್ದ ಅವರಿಗೆ ಕೊನೆಗೂ ಬೆಡ್ ಲಭಿಸಿದ್ದರಿಂದ ನಿಟ್ಟುಸಿರು ಬಿಟ್ಟರು.

ರೋಗಿಗಳೊಂದಿಗೆ ಆರೋಗ್ಯವಂತರ ಸಾಗಣೆ!

ಬಿಮ್ಸ್‌ನ ತುರ್ತು ಚಿಕಿತ್ಸಾ ವಿಭಾಗದಿಂದ ಬೇರೆ ಕಟ್ಟಡಕ್ಕೆ ಸೋಂಕಿತರನ್ನು ಸ್ಥಳಾಂತರ ಮಾಡುವ ವೇಳೆ, ಕುರಿಗಳನ್ನು ವಾಹನದಲ್ಲಿ ತುಂಬುವಂತೆ ಒಂದೇ ಆಂಬುಲೆನ್ಸ್‌ನಲ್ಲಿ ಬೇರೆ ಬೇರೆ ಸೋಂಕಿತರನ್ನು ಹಾಗೂ ಅವರ ಕುಟುಂಬದ ಆರೋಗ್ಯವಂತ ಸದಸ್ಯರನ್ನೂ ಒಟ್ಟಿಗೇ ಕೂರಿಸಿ ಸ್ಥಳಾಂತರ ಮಾಡುತ್ತಿದ್ದಾರೆ. ಸೋಂಕಿತ ತಾಯಿಯ ಜತೆ ಆರೋಗ್ಯವಂತ ಮಗಳನ್ನು ಹಾಗೂ ಇನ್ನೊಂದು ಕುಟುಂಬದ ಸೋಂಕಿತನ ಒತೆ ಆತನ ಆರೋಗ್ಯವಂತ ಮಗನನ್ನೂ ಸಹ ಆಂಬುಲೆನ್ಸ್‌ನಲ್ಲೇ ಕರೆ ತಂದಿರುವುದು ಜನತೆಯಲ್ಲಿ ಭೀತಿ ಹುಟ್ಟಿಸುತ್ತಿದೆ. ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದ ಬಿಮ್ಸ್ ಸಿಬ್ಬಂದಿ ಎಡವಟ್ಟಿನಿಂದ ಕರೊನಾ ಮತ್ತಷ್ಟು ಹರಡುವ ಆತಂಕ ಶುರುವಾಗಿದೆ.

ಕರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಸೇರಿ 1,900 ಬೆಡ್ ಕಾಯ್ದಿರಿಸಲಾಗಿದೆ. ಇದರಲ್ಲಿ 165 ಐಸಿಯು ಬೆಡ್‌ಗಳಿವೆ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಖಾಸಗಿ ವೈದ್ಯರ ಜತೆಗೆ ಸಭೆ ಮಾಡಲಾಗಿದೆ. ಬೆಡ್‌ಗಳ ಕಾಯ್ದಿರಿಸುವ ಬಗ್ಗೆ ಮಾತನಾಡಿದ್ದೇವೆ. ಶೇ. 50 ಬೆಡ್ಕಾಯ್ದಿರಿಸಲು ಸೂಚಿಸಲಾಗಿದೆ. ವೈದ್ಯರೂ ಸಹ ಒಪ್ಪಿಗೆ ಸೂಚಿಸಿದ್ದಾರೆ. ಜಿಲ್ಲೆಯ 47 ಆಸ್ಪತ್ರೆಗಳು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಒಪ್ಪಿಗೆ ನೀಡಿವೆ.| ಎಸ್.ವಿ.ಮುನ್ಯಾಳ ಜಿಲ್ಲಾ ಆರೋಗ್ಯಾಧಿಕಾರಿ, ಬೆಳಗಾವಿಕರೊನಾ ಸೋಂಕಿತರಿಗಾಗಿ ಬಿಮ್ಸ್‌ನಲ್ಲಿ 300 ಬೆಡ್ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಎಲ್ಲಬೆಡ್‌ಗಳಲ್ಲಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಡ್‌ಗಳ ಕೊರತೆಯಾಗಿದ್ದು, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಅವರೊಂದಿಗೆ ಚರ್ಚಿಸಿ ಬೆಡ್ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.| ಡಾ. ವಿನಯ ದಾಸ್ತಿಕೊಪ್ಪ, ಬಿಮ್ಸ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net