ಬೆಟ್ಟಳ್ಳಿ ಮಾರಮ್ಮನ ಜಾತ್ರೋತ್ಸವಕ್ಕೆ ಚಾಲನೆ

14 HANUR 1 A
Published on

ಹನೂರು: ಪಟ್ಟಣದ ಅದಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.


ಸಂಪ್ರದಾಯದಂತೆ ದೇಗುಲದ ಅರ್ಚಕ ರಾಜೋಜಿರಾವ್ ಸಿಂಧೆ ಅವರಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕಂಕಣ ಕಟ್ಟಲಾಗಿತ್ತು. ದೇವಸ್ಥಾನದ ಮುಂಭಾಗ ಅಗ್ನಿಕುಂಡದ ಮೂರು ಕವಡಿನ ಕಂಬವನ್ನು ಹಾಕಿ ಅದರ ಮೇಲೆ ಕರಗವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು.


ಸೋಮವಾರ ರಾತ್ರಿ ದೇವಾಲಯದಲ್ಲಿ ದೇವಿಯ ಮೂರ್ತಿಗೆ ಗಂಧ, ಪನ್ನೀರು, ಹಾಲು, ಮೊಸರು, ಅರಿಶಿಣ, ಕುಂಕುಮ, ಜೇನುತುಪ್ಪ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ ಬೆಳಗಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಅರ್ಚಕರಾದ ರಾಜೋಜಿರಾವ್ ಸಿಂಧೆ, ಅರುಣ್‌ರಾವ್ ಸಿಂಧೆ ಹಾಗೂ ಜಯಂತ್‌ರಾವ್ ಸಿಂಧೆ ಪೂಜಾ ಕೈಂಕರ್ಯ ನೆರವೇರಿಸಿದರು.


ಜಾಗರ ಅರ್ಪಣೆ: ಜಾಗರ ಅರ್ಪಣೆ ಅಂಗವಾಗಿ ಕಳೆದೊಂದು ವಾರದಿಂದ ನೀರುಣಿಸಿ ಬೆಳೆಸಿದ ಧಾನ್ಯಗಳ ಪೈರುಗಳಿಗೆ (ಜಾಗರ) ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರ ತಡರಾತ್ರಿ 1.30ರಲ್ಲಿ ಸೊಪ್ಪಿನಕೇರಿ, ಬನ್ನಿಮಂಟಪ, ಮಾರುತಿ ನಗರ ಹಾಗೂ ಪಟ್ಟಣದ ಇನ್ನಿತರ ಬಡಾವಣೆಗಳಿಂದ ಜಾಗರವನ್ನು ಹೊತ್ತ ಹೆಣ್ಣು ಮಕ್ಕಳು, ಮಹಿಳೆಯರು ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ದೇಗುಲಕ್ಕೆ ಆಗಮಿಸಿ ಭಕ್ತಿ-ಭಾವದಿಂದ ಜಾಗರವನ್ನು ಅರ್ಪಿಸಿದರು. ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು.


ದೇಗುಲದ ವತಿಯಿಂದ ಬೆಳಗಿನ ಉಪಾಹಾರದ ಜತೆಗೆ ಭಕ್ತರಿಗೆ ಅನ್ನದಾನ, ಮಜ್ಜಿಗೆ, ಪಾನಕ ವಿತರಣಾ ವ್ಯವಸ್ಥೆ ಮಾಡಲಾಗಿತ್ತು. ಹನೂರು ಪೊಲೀಸರು ದೇಗುಲ ಸೇರಿದಂತೆ ಪಟ್ಟಣದ ಜನಸಂದಣಿ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.


ದೀಪಾಲಂಕಾರ: ಜಾತ್ರಾ ಮಹೋತ್ಸವದ ಪ್ರಯುಕ್ತ ದೇಗುಲದ ಗರ್ಭಗುಡಿ, ಆವರಣ, ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ಎಲ್ಲ ಬೀದಿಗಳನ್ನೂ ತಳಿರು-ತೋರಣ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ದೇವಿಯ ಮೂರ್ತಿಯನ್ನು ವಿವಿಧ ಹಣ್ಣು ಹಾಗೂ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಬಸ್ ನಿಲ್ದಾಣದ ಪ್ರಮುಖ ವೃತ್ತದಲ್ಲಿ ಸುಮಾರು 30 ಅಡಿಯ ವಿದ್ಯುತ್ ದೀಪಗಳಿಂದ ಕಂಗೊಳಿಸುವ ಮಾರಮ್ಮನ ಚಿತ್ರವನ್ನು ಅಳವಡಿಸಲಾಗಿತ್ತು.


ತಂಪುಜ್ಯೋತಿ ಅರ್ಪಣೆ: ಮಂಗಳವಾರ ತಂಪುಜ್ಯೋತಿ (ತಂಬಿಟ್ಟು) ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ಪ್ರತಿ ಮನೆಯಿಂದ ತಯಾರಿಸಿದ ತಂಪುಜ್ಯೋತಿಯನ್ನು ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಅರ್ಪಿಸಲಾಯಿತು. ಬೆಳಗ್ಗೆಯಿಂದಲೇ ಪ್ರಾರಂಭವಾದ ತಂಪುಜ್ಯೋತಿ ಅರ್ಪಣೆ ಸಂಜೆವರೆಗೂ ನಡೆಯಿತು. ಭಕ್ತರು ದೇಗುಲದ ಮುಂಭಾಗ ಧೂಪ ಹಾಕಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಉಪ್ಪು ಹಾಕಿ ಇಡುಗಾಯಿ ಒಡೆದರು.


ಇಂದು ಬಾಯಿಬೀಗ: ಜಾತ್ರೆಯ 3ನೇ ದಿನವಾದ ಬುಧವಾರ ಬಾಯಿಬೀಗ ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ 86 ಭಕ್ತರು ದೊಡ್ಡ ಬಾಯಿಬೀಗವನ್ನು (20 -25 ಅಡಿ ಉದ್ದದ ಕಬ್ಬಿಣದ ಸರಳು) ಹಾಕಿಸಿಕೊಳ್ಳಲಿದ್ದಾರೆ. ಇದಕ್ಕೆ ದೇಗುಲದ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net