ಬೆಟ್ಟಳ್ಳಿ ಮಾರಮ್ಮಗೆ ತರಕಾರಿ ಅಲಂಕಾರ

15 HANUR 1.A
ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು.
Published on

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಭಾನುವಾರ ಧನುರ್ಮಾಸ ಸಮಾಪ್ತಿ ಹಾಗೂ ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ದೇವಿಗೆ ವಿವಿಧ ಬಗೆಯ ತರಕಾರಿಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಒಳಾಂಗಣವನ್ನು ತರಕಾರಿ ಹಾರದಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ದೇವಿಗೆ ಪನ್ನೀರು, ಎಳನೀರು, ಜೇನುತುಪ್ಪ, ಹಾಲು, ಮೊಸರು, ಗಂಧ, ತುಪ್ಪ ಅರಿಸಿನ, ಕುಂಕುಮ ಹಾಗೂ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು. ಮಹಾ ಮಂಗಳಾರತಿ ಬೆಳಗಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಅರ್ಚಕರಾದ ಅರುಣ್‌ರಾವ್ ಸಿಂಧೆ, ಜಯಂತ್‌ರಾವ್ ಸಿಂಧೆ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.

ಪಟ್ಟಣ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿದ್ದರು. ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನವನ್ನು ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ದೇಗುಲದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net