

ಹನೂರು: ಪಟ್ಟಣದ ಶ್ರೀಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಶುಕ್ರವಾರ ಧನುರ್ಮಾಸ ಪ್ರಾರಂಭದ ಹಿನ್ನೆಲೆ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ದೇಗುಲವನ್ನು ತಳಿರು ತೋರಣಗಳಿಂದ ಸಿಂಗಾರಿಸಲಾಗಿತ್ತು. ದೇವಿಗೆ ಬೆಳಗ್ಗೆ 4.30ರಲ್ಲಿ ಪನ್ನೀರು, ಎಳನೀರು, ಕುಂಕುಮ, ಗಂಧ, ಜೇನುತುಪ್ಪ, ಹಾಲು, ಮೊಸರು, ಸಕ್ಕರೆ, ಎಣ್ಣೆ ಹಾಗೂ ಗಂಧದ ಅಭಿಷೇಕ ನೆರವೇರಿಸಲಾಯಿತು. ಬಳಿಕ ದೇವಿಯ ಮೂರ್ತಿಯನ್ನು ಚಿನ್ನಾಭರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿ 5.15ರ ವೇಳೆಯಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಧನುರ್ಮಾಸ ಪ್ರಾರಂಭದ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾಮಂಗಳಾರತಿ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಅರ್ಚಕ ಜಯಂತ್‌ರಾವ್ ಶಿಂಧೆ ಪೂಜಾ ಕೈಂಕರ್ಯ ನೆರವೇರಿಸಿದರು.
ಪಟ್ಟಣ ಸೇರಿದಂತೆ ಭೈರನತ್ತ, ಮಣಗಳ್ಳಿ, ಬಂಡಳ್ಳಿ, ಉದ್ದನೂರು, ಬೆಳತ್ತೂರು, ಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರ ಕಡೆಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ದೇಗುಲದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.