ಬೆಟ್ಟ ಕಾಡಿಗೆ ‘ರುದ್ರ’ ಆಕರ್ಷಣೆ

12rajesh5
Published on

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದ ಸಾರಿ ಪ್ರದೇಶದಲ್ಲಿ ಪ್ರವಾಸಿಗರನ್ನು ‘ರುದ್ರ’ ಆಕರ್ಷಣೆಯಿಂದ ಸೆಳೆಯುತ್ತಿದ್ದಾನೆ.

ಹನೂರು ತಾಲೂಕಿನ ಅಜ್ಜೀಪುರ ಸಾರಿ ಕೇಂದ್ರದ ಮಾರ್ಗದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಒಂಟಿ ಸಲಗಕ್ಕೆ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಪ್ರೀತಿಯಿಂದ ರುದ್ರ ಎಂಬ ಹೆಸರು ಇಟ್ಟಿದ್ದಾರೆ. ಬಲು ಎತ್ತರದ ಗಾಂಭೀರ್ಯದ ಗಜರಾಜ ರುದ್ರ. ದಂತಗಳಿಂದ ಕಂಗೊಳಿಸುವ ರುದ್ರ ದಸರಾ ಆನೆ ಅರ್ಜುನನ್ನೇ ನೆನಪು ಮಾಡುತ್ತಾನೆ.

ಉಡುತೊರೆ ಜಲಾಶಯದ ಮಾರ್ಗವಾಗಿ ಸಾಗುವ ಪ್ರವಾಸಿಗರಿಗೆ ಸಾರಿ ರಸ್ತೆಯ ಸುತ್ತಮುತ್ತ ಒಮ್ಮೆಯಾದರೂ ರುದ್ರ ಕಾಣಸಿಗುತ್ತಾನೆ. ಆಗಿಂದಾಗ್ಗೆ ಸಾರಿಗೆ ಬರುವ ಪ್ರವಾಸಿಗರಿಗೆ ರುದ್ರನ ಪರಿಚಯವಾಗಿದೆ. ಹೊಸದಾಗಿ ಬರುವವರು ಮೊದಲ ಭೇಟಿಯಲ್ಲೇ ನೆನಪಿನಲ್ಲಿ ಇಟ್ಟುಕೊಳ್ಳುವುದರಲ್ಲಿ ಅನುಮಾನವಿಲ್ಲ.

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹನೂರಿನ ಪಿ.ಜಿ.ಪಾಳ್ಯ ಮತ್ತು ಅಜ್ಜೀಪುರ ಎರಡು ಕಡೆ ಸಾರಿ ಸೌಲಭ್ಯವಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ಹೋಗುವ ಭಕ್ತರು ಅಜ್ಜೀಪುರಕ್ಕೆ ಆಗಮಿಸಿ ಸಾರಿ ಮಾಡಲು ಅನುಕೂಲಕರ ಮಾರ್ಗವಾಗಿದೆ. ಈ ಕಾಡಿನಲ್ಲಿ ಹುಲಿ, ಆನೆ, ಕಾಟಿ, ಜಿಂಕೆ, ಕರಡಿ ಇನ್ನಿತರೆ ವನ್ಯಜೀವಿಗಳು ಪ್ರವಾಸಿಗರಿಗೆ ಕಾಣಸಿಕ್ಕಿವೆ. ಉಡುತೊರೆ ಜಲಾಶಯದ ಹಿನ್ನೀರಿನಲ್ಲಿ ಪಕ್ಷಿಗಳ ಕಲರವವಿದೆ. ವಿಶೇಷವಾಗಿ ಆನೆ ಕಾಡು ಎಸಿಕೊಂಡಿದೆ. 2024ರ ಆನೆ ಗಣತಿ ಪ್ರಕಾರ, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 704 ಆನೆಗಳು ಇವೆ. ಸಾರಿಗೆ ಬರುವ ಪ್ರವಾಸಿಗರಿಗೆ ಆನೆಗಳ ದರ್ಶನ ಸಿಗುತ್ತದೆ. ರುದ್ರನಂತಹ ಆನೆಗಳು ಆಕರ್ಷಣೆಯ ಕೇಂದ್ರವಾಗಿ ಸೆಳೆಯುತ್ತವೆ.

ಪ್ರಾಣಿಗಳೂ ೇಮಸ್ ಆಗ್ತಾವೆ:

ಅರಣ್ಯ ಪ್ರದೇಶದ ಸಾರಿ ಮಾರ್ಗದಲ್ಲಿ ಕಾಣಿಸಿಕೊಂಡು ಪ್ರವಾಸಿಗರಿಗೆ ಪುಳಕ ಹುಟ್ಟಿಸಿ ಪ್ರಸಿದ್ಧಿ ಪಡೆಯುವ ಪ್ರಾಣಿಗಳೂ ಇವೆ.

ಈ ವಿಚಾರದಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಪ್ರಖ್ಯಾತಿ ಪಡೆದಿದ್ದ ‘ಪ್ರಿನ್ಸ್’ ಎಂಬ ಹುಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ದಕ್ಷಿಣ ಭಾರತದ ಅತ್ಯಂತ ಸ್ಪುರದ್ರೂಪಿ ಮತ್ತು ಕೆಚ್ಚೆದೆಯ ಹುಲಿಯಾಗಿದ್ದ ಪ್ರಿನ್ಸ್‌ಗೆ ಪ್ರವಾಸಿಗರು, ಪ್ರಾಣಿಪ್ರಿಯರಿಂದ ಹೆಸರು ನಾಮಕರಣವಾಗಿತ್ತು. ಇದು ಬಂಡೀಪುರ ಕಾಡಿನ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಪ್ರಿನ್ಸ್‌ನನ್ನು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಯಭಾರಿ ಎಂದೇ ಕರೆಯಲಾಗುತ್ತಿತ್ತು. ಪ್ರವಾಸಿಗರು ತೆಗೆಯುವ ಪೋಟೋದಲ್ಲಿ ಹೆಚ್ಚಾಗಿ ಕಾಣಿಸುತ್ತಿತ್ತು. ಈ ಹುಲಿ ಸಾವಿನ ನಂತರ ಪ್ರವಾಸಿಗರಿಗೆ ಮಂಕು ಕವಿದಂತಾಗಿತ್ತು. ನಂತರದ ದಿನಗಳಲ್ಲಿ ‘ಮಾದೇಶ’ ಎಂಬ ಹುಲಿಯ ಹೆಸರು ಜೋರು ಸದ್ದು ಮಾಡಿತ್ತು. ಇತ್ತೀಚೆಗೆ ‘ಭೀಮ’ ಹೆಸರಿನ ಹುಲಿಯು ಪ್ರವಾಸಿಗರನ್ನು ಸೆಳೆಯುತ್ತಿದೆ. ಹೀಗೆ ಪ್ರಾಣಿಗಳೂ ಸಹ ಪ್ರಸಿದ್ಧಿ ಪಡೆದುಕೊಳ್ಳುತ್ತಿವೆ. ಇದು ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಿರುವ ಹುಲಿಗಳ ವಿಚಾರದಲ್ಲಿ ನಿಜವಾಗಿದೆ. ಆದರೆ ಕಾಡಾನೆಗಳು ಪ್ರಸಿದ್ಧಿ ಪಡೆಯುವುದು ಕಡಿಮೆ. ಶಿಬಿರಗಳಲ್ಲಿ ಸಾಕಿರುವ ಆನೆಗಳಿಗೆ ಹೆಸರು ಇಡಲಾಗುತ್ತದೆ. ಅವುಗಳಿಗೆ ನಡವಳಿಕೆ ಕಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಕಾನೆಗಳು ಪ್ರಸಿದ್ಧಿ ಪಡೆದುಕೊಳ್ಳುತ್ತವೆ. ದಸರಾದಲ್ಲಿ ಭಾಗವಹಿಸುವ ಆನೆಗಳು ಖ್ಯಾತಿ ಪಡೆದುಕೊಳ್ಳುತ್ತವೆ. ಕಾಡಾನೆಗಳು ಈ ವಿಚಾರದಲ್ಲಿ ಖ್ಯಾತಿ ಎಂಬುದು ಭಿನ್ನ. ಹಾಗಿದ್ದರೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ರುದ್ರ ಪ್ರಸಿದ್ಧಿ ಪಡೆಯುತ್ತಿರುವುದು ಗಮನಾರ್ಹ.

ಹಿನ್ನೀರಿನಲ್ಲಿ ಚಿನ್ನಾಟ:

ಉಡುತೊರೆ ಜಲಾಶಯದ ಹಿನ್ನೀರಿನಲ್ಲಿ ಆನೆಗಳು ನೀರಿನಲ್ಲಿ ಚಿನ್ನಾಟವಾಡುತ್ತವೆ. ಇದೇ ಮಾರ್ಗದಲ್ಲಿ ಸಾರಿ ಬರುವ ಪ್ರವಾಸಿಗರಿಗೆ ಆನೆಗಳು ಕಾಣಸಿಗುತ್ತವೆ. ನೀರಿನಲ್ಲಿ ಆಟವಾಡಿದ ಆನೆಯೊಂದು ಮಣ್ಣನ್ನು ತನ್ನ ಮೈ ಮೇಲೆ ಎರಚಿಕೊಳ್ಳುವ ದೃಶ್ಯವನ್ನೂ ಪ್ರವಾಸಿಗರು ನೋಡಿದ್ದಾರೆ. ಜಲಾಶಯದ ಹಿನ್ನೀರಿನಲ್ಲಿ ವಿವಿಧ ಪ್ರಬೇಧದ ಪಕ್ಷಿಗಳು ಇದ್ದು, ಗಮನ ಸೆಳೆಯುತ್ತವೆ.

ರುದ್ರ ದೃಶ್ಯಾವಳಿ:

ಸಾರಿ ವೇಳೆ ರುದ್ರ ಆನೆಯನ್ನು ಕಾಣುವ ಪ್ರವಾಸಿಗರು ಮೊಬೈಲ್‌ಗಳಲ್ಲಿ ವಿಡಿಯೋ ಸೆರೆ ಮಾಡಿದುಕೊಳ್ಳುತ್ತಿದ್ದಾರೆ. ಆನೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಕಾಡಿನಲ್ಲಿ ಪ್ರವಾಸಿಗರಿಗೆ ಹುಲಿಯ ದರ್ಶನವಾಗಿದೆ. ಜಿಂಕೆಯನ್ನು ಹುಲಿ ಬೇಟೆಯಾಡಿದ್ದ ದೃಶ್ಯವನ್ನು ಪ್ರವಾಸಿಗರು ನೋಡಿ ಪುಳಕಿತರಾಗಿದ್ದರು. ಇತ್ತೀಚೆಗಷ್ಟೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ ನಡೆಸಲಾಗಿತ್ತು. ಅಪರೂಪದ ಪಕ್ಷಿಗಳ ಆವಾಸ ಸ್ಥಾನವಾಗಿ ಮ.ಬೆಟ್ಟ ಗುರುತಿಸಿಕೊಂಡಿದೆ.

ಅಜ್ಜೀಪುರದಲ್ಲಿ ಸಾರಿಗೆ ತೆರಳಿದ್ದ ಮಾರ್ಗ ಮಧ್ಯೆ ಕಾಡಾನೆಯೊಂದನ್ನು ನೋಡಿ ಖುಷಿಯಾಯಿತು. ಇದನ್ನು ಇಲ್ಲಿನವರು ಪ್ರೀತಿಯಿಂದ ರುದ್ರ ಎಂದು ಕರೆಯುತ್ತಾರೆ ಎಂದು ತಿಳಿಯಿತು. ಕಾಡಾನೆ ರುದ್ರ ನೆನಪಿನಲ್ಲಿ ಉಳಿಯುವಂತ ನೋಟಕ್ಕೆ ಸಾಕ್ಷಿಯಾಯಿತು.

ರವೀಶ್, ಪ್ರವಾಸಿಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net