ಬೆಂಬಲಿತರ ಕೇಸ್ ಹಿಂಪಡೆಯಲು ಮುಂದಾದ ಸರ್ಕಾರ

6CBP1a
Published on

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ರಾಜಕೀಯ ಪಕ್ಷಗಳ ಬೆಂಬಲಿತ 63 ಮುಖಂಡರ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸುವ ಸಂಬಂಧ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿರುವುದು ಜಿಲ್ಲೆಯಲ್ಲಿ ಕಿಡಿ ಹೊತ್ತಿಸಿದೆ, ಜನಹಿತಕ್ಕಾಗಿ ಹೋರಾಡಿ ಇಂದಿಗೂ ವಿಚಾರಣೆಗಾಗಿ ಅಲೆದಾಡುತ್ತಿರುವ ನೀರಾವರಿ ಹೋರಾಟಗಾರರ ಕಣ್ಣು ಕೆಂಪಗಾಗಿಸಿದೆ.

ವಿವಿಧ ಹೋರಾಟಗಳಲ್ಲಿ ಸ್ವಪಕ್ಷೀಯರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ರದ್ದುಪಡಿಸಲು ಸರ್ಕಾರಕ್ಕೆ ಯಾವ ಅಡ್ಡಿಯೂ ಇರುವುದಿಲ್ಲ ಎಂದು ಕಿಡಿಕಾರಿರುವ ಹೋರಾಟಗಾರರು, ಸ್ವಲಾಭದ ನಿರೀಕ್ಷೆಯಿಲ್ಲದೆ ಬಯಲುಸೀಮೆ ಜನರ ನೀರಿನ ದಾಹ ನೀಗಿಸಲು ಹೋರಾಟ ನಡೆಸಿ, ಕೇಸುಗಳನ್ನು ಎದುರಿಸುತ್ತಿರುವವರು ಕಾಣಿಸುವುದೇ ಇಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಜನಹಿತಕ್ಕಾಗಿ ಹೋರಾಡಿದವರು ವೈಯಕ್ತಿಕ ಕೆಲಸಗಳನ್ನು ಬಿಟ್ಟು ಕೇಸಿನ ಇತ್ಯರ್ಥಕ್ಕೆ ಅಲೆಯುತ್ತಿದ್ದಾರೆ, ಮೊಕದ್ದಮೆ ರದ್ದುಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಅಲೆದಾಡುತ್ತಿದ್ದರೂ ಕೇಸುಗಳು ಮಾತ್ರ ಇತ್ಯರ್ಥವಾಗಿಲ್ಲ. ಆದರೆ ಪ್ರಚಾರಕ್ಕಾಗಿ, ರಾಜಕೀಯ ಲಾಭಕ್ಕಾಗಿ ನಡೆಸಿರುವ ಹೋರಾಟಗಳಲ್ಲಿ ಮುಖಂಡರ ವಿರುದ್ಧ ದಾಖಲಾಗಿರುವ ಪ್ರಕರಣಗಳು ರದ್ದಾಗುತ್ತಿರುವುದು ಸಹಜವಾಗಿ ಹೋರಾಟಗಾರರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದೆ.

ಹೆದ್ದಾರಿ ತಡೆಗೆ ಬಿತ್ತು ಕೇಸ್ : 2015ರಲ್ಲಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಸಂಘಟನೆಗಳ ನೇತೃತ್ವದಲ್ಲಿ ತಾಲೂಕಿನ ಚದಲಪುರ ಕ್ರಾಸ್ ಬಳಿ 92ನೇ ದಿನ ಸತ್ಯಾಗ್ರಹ ಕೈಗೊಳ್ಳಲಾಗಿತ್ತು, ರಾಜ್ಯ ಸರ್ಕಾರ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಡಿ.21 ರಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಬಂದ್ ಕೈಗೊಂಡು ಇತರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಸಂಚಾರ ತಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಂದಿಗಿರಿಧಾಮ ಠಾಣೆ ಪೊಲೀಸರು 15 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು ಟೈರುಗಳಿಗೆ ಬೆಂಕಿ, ದೊಣ್ಣೆ ಹಿಡಿದುಕೊಂಡು ರಸ್ತೆ ಸಂಚಾರ ತಡೆ ಸೇರಿ ನಾನಾ ಆರೋಪಗಳನ್ನು ದಾಖಲಿಸಿದ್ದರು.

ಯಾರ‌್ಯಾರ ಮೇಲೆ ಕೇಸ್ : ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ಸಂಚಾಲಕ ಮಳ್ಳೂರು ಹರೀಶ್, ರೈತ ಸಂಘದ ಮತ್ತು ಹಸಿರು ಸೇನೆ ಸಂಘಟನಾ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಹೋರಾಟಗಾರರಾದ ಚಲಪತಿ, ಸುಷ್ಮಾ ಶ್ರೀನಿವಾಸ್, ಉಷಾ ಆಂಜನೇಯರೆಡ್ಡಿ, ಆಯಿಷಾ ಸುಲ್ತಾನ್, ಯಲುವಹಳ್ಳಿ ಸೊಣ್ಣೇಗೌಡ, ಮಂಚನಬಲೆ ಶ್ರೀನಿವಾಸ್, ನರಸಿಂಹಮೂರ್ತಿ, ಶಶಿಕುಮಾರ್, ಮೋಹನ್, ಬಾಲು, ಪುರದಗಡ್ಡೆ ಕೃಷ್ಣಪ್ಪ, ಹನುಮಪ್ಪ ಅವರ ಮೇಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net