ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ

Capture
Published on

ಬೀದರ್: ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿಗೆ ಮುಂದಾಗಿರುವುದು ರೈತರಲ್ಲಿ ಮಂದಹಾಸ ತಂದಿದೆ. ಆದರೆ ಖರೀದಿಗೆ ಗುರಿ ನಿಗದಿಗೊಳಿಸಿರುವುದು ಆತಂಕ ಮೂಡಿಸಿದೆ.

ಕೇಂದ್ರ ಸಕರ್ಾರದ ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಕಡಲೆಯನ್ನು 5230 ರೂ.ಗಳಲ್ಲಿ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಬೀದರ್ ಸೇರಿ ರಾಜ್ಯದ 14 ಜಿಲ್ಲೆಗಳಲ್ಲಿ ಕಡಲೆ ಖರೀದಿಗೆ ಅನುಮತಿ ನೀಡಲಾಗಿದ್ದು, ಈ ಎಲ್ಲ ಜಿಲ್ಲೆಗಳಿಂದ 1,17,000 ಮೆಟ್ರಿಕ್ ಟನ್ ಖರೀದಿಗೆ ಗರಿಷ್ಠ ಮಿತಿ ನಿಗದಿಗೊಳಿಸಿ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.

ಬೀದರ್, ಧಾರವಾಡ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬಾಗಲಕೋಟೆ, ದಾವಣಗೆರೆ, ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆ ರೈತರಿಂದ ಕಡಲೆ ಖರೀದಿಸಲು ಕೇಂದ್ರದ ನಾಫೆಡ್ ಸಂಸ್ಥೆಯನ್ನು ಖರೀದಿ ಸಂಸ್ಥೆಯಾಗಿ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ರಾಜ್ಯದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಈ ಜಿಲ್ಲೆಗಳಿಗೆ ಹೆಸರು ಖರೀದಿ ಗರಿಷ್ಠ ಮಿತಿ 1.17 ಲಕ್ಷ ಮೆ.ಟನ್ ಗುಣಮಟ್ಟದ ಕಡಲೆ ಕಾಳು ಖರೀದಿಸಲು ಅವಕಾಶ ನೀಡಲಾಗಿದೆ.

ಸರ್ಕಾರದ ಆದೇಶ ಹೊರಡಿಸಿದ ದಿನದಿಂದ (ೆ.14ರಿಂದ) ನೋಂದಣಿ ಕಾಲಾವಧಿಯನ್ನು 45 ದಿನ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದೆ. ನೋಂದಣಿ ಜತೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಎಕರೆಗೆ ಗರಿಷ್ಠ 4 ಹಾಗೂ ಒಬ್ಬ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಗುಣಮಟ್ಟದ ಕಡಲೆ ಖರೀದಿಗೆ ಸರ್ಕಾರ ಅವಕಾಶ ನೀಡಿದೆ.

ಮಾರುಕಟ್ಟೆಯಲ್ಲಿ ಕಮ್ಮಿ ದರ: ಬೆಂಬಲ ಬೆಲೆಯಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಡಲೆ ಬೆಲೆ ಕಮ್ಮಿ ಇದೆ. ಬೀದರ್ ಎಪಿಎಂಸಿಯಲ್ಲಿ ಸೋಮವಾರ ಕ್ವಿಂಟಾಲ್ ಕಡಲೆ 4392-4760 ರೂಪಾಯಿವರೆಗೆ ಮಾರಾಟವಾಗಿದೆ. ಬೆಂಬಲ ಬೆಲೆಯಲ್ಲಿ ಸರ್ಕಾರ ಕ್ವಿಂಟಾಲ್ಗೆ 5230 ರೂ. ಬೆಲೆ ನಿಗದಿಪಡಿಸಿದೆ.

ಮಿತಿ ಹಾಕಿದ ಸರ್ಕಾರ: ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿಗೆ ಸರ್ಕಾರ ಮಿತಿ ಹಾಕಿದೆ. ಎಕರೆಗೆ 4 ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಮಾತ್ರ ಕಡಲೆಕಾಳು ಖರೀದಿಗೆ ಅವಕಾಶ ನೀಡಲಾಗಿದೆ. ಖರೀದಿಗೆ ಮಿತಿ ಬೇಡ, ರೈತರು ಬೆಳೆದ ಎಲ್ಲ ಧಾನ್ಯ ಖರೀದಿಸಬೇಕು ಎಂಬ ರೈತ ಸಂಘಟನೆಗಳ ಒತ್ತಾಯದ ಮಧ್ಯೆಯೂ ಮಿತಿ ನಿಗದಿಪಡಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಖರೀದಿ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.

ತೊಗರಿ ಖರೀದಿಗೂ ಚಾಲನೆ: ಕೇಂದ್ರದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೂ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಕ್ವಿಂಟಾಲ್ಗೆ 6300 ರೂ. ದರ ನಿಗದಿಪಡಿಸಿದ್ದು, ಜಿಲ್ಲಾದ್ಯಂತ 30 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಹಾಗೂ ಇತರ ಸಂಸ್ಥೆಗಳ ಮೂಲಕ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ತೊಗರಿ ಖರೀದಿಗೆ ನೋಂದಣಿ ಆರಂಭವಾಗಿದ್ದು, ಖರೀದಿ ಅವಧಿಯನ್ನು 90 ದಿನ ನಿಗದಿಪಡಿಸಲಾಗಿದೆ. ಎಕರೆಗೆ 7.5 ಮತ್ತು ಪ್ರತಿ ರೈತನಿಂದ ಗರಿಷ್ಠ 15 ಕ್ವಿಂಟಾಲ್ ಮಾತ್ರ ಖರೀದಿಗೆ ಸಕರ್ಾರ ಮಿತಿ ಹೇರಿದೆ. ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಸದ್ಯ 5500-6666 ರೂ.ವರೆಗೆ ಮಾರಾಟವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net