

ಹಾಸನ: ರೈತರಿಂದ ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿ ಆರಂಭವಾಗಿದ್ದು, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧಿಕಾರಿಗಳು ಇಲ್ಲಸಲ್ಲದ ನೆಪವೊಡ್ಡಿ ರಾಗಿ ಖರೀದಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕೆ.ಬ್ಯಾಡರಹಳ್ಳಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ರೈತರು ರಾಗಿ ಸಮೇತ ಡಿಸಿ ಕಚೇರಿಗೆ ಆಗಮಿಸಿ ಎಪಿಎಂಸಿಯಲ್ಲಿ ಆಗುತ್ತಿರುವ ತೊಂದರೆಯನ್ನು ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.
ಕ್ವಿಂಟಾಲ್‌ಗೆ 3,256 ರೂ. ದರ ನಿಗದಿಪಡಿಸಿ ಮಾ. 5 ರಿಂದ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ರಾಗಿ ಗುಣಮಟ್ಟ ಪರೀಕ್ಷೆಗಾಗಿ ಇದೇ ಮೊದಲ ಬಾರಿಗೆ ಜರಡಿ ಬಳಸಲಾಗುತ್ತಿದೆ. ಇದನ್ನು ಅರಿತ ರೈತರು ರಾಗಿಯನ್ನು ಹಸನು ಮಾಡಿಕೊಂಡೇ ಬರುತ್ತಿದ್ದಾರೆ. ಆದರೆ ಎಪಿಎಂಸಿ ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅನ್ನದಾತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಗಿ ಪದಾರ್ಥ ಜರಡಿಗೆ ಹಾಕುವ ಹಮಾಲಿಗಳು ಕ್ವಿಂಟಾಲ್‌ಗೆ 100 ರೂ., ಜರಡಿಗೆ ಸುರಿಯುವುದಕ್ಕೆ 30 ರೂ. ಕೇಳುತ್ತಾರೆ. ದಲ್ಲಾಳಿಗಳು, ಹಮಾಲಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ವರ್ಷ ಮಳೆ ಇಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಅಲ್ಪಸ್ವಲ್ಪ ಬೆಳೆದಿದ್ದ ರಾಗಿ ಮಾರಾಟ ಮಾಡಿ ಜೀವನ ನಡೆಸಬೇಕೆಂದರೆ ಅದಕ್ಕೂ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಎಪಿಎಂಸಿ ಅಳವಡಿಸಿರುವ ಜರಡಿ ಸರಿಯಿಲ್ಲ. ಒಂದು ಕ್ವಿಂಟಾಲ್ ರಾಗಿ ಹಾಕಿದರೆ 25 ಕೆ.ಜಿ. ಕೆಳಗೆ ಸುರಿಯುತ್ತದೆ. ಈ ರೀತಿಯಾದರೆ ಹೇಗೆ ರೈತರು ಉದ್ದಾರ ಆಗುತ್ತಾರೆ ಎಂದು ಪ್ರಶ್ನಿಸಿದರು.
ಗ್ರಾಮದ ಶಿವಸ್ವಾಮಿ, ರಂಗಸ್ವಾಮಿ, ಶೇಖರ್, ಹನುಮೇಗೌಡ, ಶಿವರಾಜು. ಮಹೇಶ್, ನಾಗರಾಜು ಇತರರು ಇದ್ದರು.