

ಕೋಲಾರ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2024&-25ನೇ ಸಾಲಿನಲ್ಲಿ ಭತ್ತ, ರಾಗಿ, ಜೋಳ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿಸಲು ಡಿ.1ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ
ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಮಾತನಾಡಿ, ರೈತರಿಂದ ರಾಗಿ, ಜೋಳ ಹಾಗೂ ಭತ್ತ ಬೆಳೆಗಳಿಗೆ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಯು 2025ರ ಜ.1ರಿಂದ ಮಾ.31ರ ವರೆಗೆ ನಡೆಯಲಿದೆ. ಕೃಷಿ ಉತ್ಪನ್ನಗಳಾದ ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ 2,300 ರೂ., ಗ್ರೇಡ್&ಎ -ಭತ್ತಕ್ಕೆ 2,320 ರೂ., ರಾಗಿಗೆ 4,290 ರೂ., ಹೈಬ್ರೀಡ್- ಬಿಳಿ ಜೋಳಕ್ಕೆ 3,371 ರೂ., ಮಾಲ್ದಂಡಿ- ಬಿಳಿ ಜೋಳಕ್ಕೆ 3,421 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದರು.
ರೈತರು ಮೊದಲು ಕೃಷಿ ಇಲಾಖೆಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆಯಾ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತಾಲೂಕು ಕೇಂದ್ರ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲ ಹೋಬಳಿಮಟ್ಟದ ಖರೀದಿ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ರೈತರ ನೋಂದಣಿ ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಫ್ರೂಟ್ಸ್ ಐಡಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಮತ್ತು ಆಧಾರ್ನೊಂದಿಗೆ ನೋಂದಣಿ ಕೇಂದ್ರಕ್ಕೆ ಬರಬೇಕು. ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೋಂದಾಯಿಸದೇ ಅವರ ಫ್ರೂಟ್ಸ್ ಐಡಿಯ ಮೂಲಕ ಖರೀದಿ ನೋಂದಣಿ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ರೈತರು ಫ್ರೂಟ್ಸ್ ಐಡಿ ನಮೂದಿಸಿದ ಸಾಕು. ಅದರಲ್ಲೇ ಎಲ್ಲ ವಿವರಗಳು ಲಭ್ಯವಿರುತ್ತವೆ. ಹಾಗಾಗಿ ಪ್ರತ್ಯೇಕವಾಗಿ ಬೇರೆ ಯಾವುದೇ ದಾಖಲೆ ನೀಡುವ ಅವಶ್ಯ ಇರುವುದಿಲ್ಲ. ಫ್ರೂಟ್ಸ್ ದತ್ತಾಂಶದನ್ವಯ ರೈತರ ಬೆಳೆ ಸಮೀಕ್ಷೆ ವಿವರದಂತೆ ಬೆಳೆ ವಿಸ್ತೀರ್ಣಕ್ಕನುಗುಣವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಹುದಾದ ಗರಿಷ್ಠ ಪ್ರಮಾಣ ತೋರಿಸಲಾಗುವುದು.
ಬೆಳೆಗಳ ಖರೀದಿ ಮಿತಿ
ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಾಲ್ನಂತೆ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಖರೀದಿಸಲಾಗುವುದು. ಜೋಳವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಎಲ್ಲ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ಖರೀದಿಸಲಾಗುವುದು. ರಾಗಿಯನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಎಲ್ಲ ರೈತರಿಂದ ಜಮೀನಿಗೆ ಅನುಗುಣವಾಗಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹಣಪಾವತಿ
ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಜೋಳ ಸರಬರಾಜು ಮಾಡಿದ ರೈತರಿಗೆ ಕೃಷಿ ಇಲಾಖೆಯಲ್ಲಿ ನೊಂದಾಯಿಸಿಕೊಂಡಿರುವ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ಹಣ ಪಾವತಿಸಲಾಗುವುದು. ಮಧ್ಯವರ್ತಿಗಳು, ಏಜೆಂಟರ್ಗಳು ಖರೀದಿ ಕೇಂದ್ರಗಳಿಗೆ ಭತ್ತ ತಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಬೆಂಬಲ ಬೆಲೆ ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ತಾಲೂಕು ಕೇಂದ್ರದಲ್ಲಿರುವ ತಹಸೀಲ್ದಾರ್, ಕೃಷಿ ಅಧಿಕಾರಿ, ಎಪಿಎಂಸಿ ಕಾರ್ಯದರ್ಶಿ, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.