

ರಾಯಚೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ ಉತ್ಪನ್ನವನ್ನು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಡಿಸಿ ಕೆ.ನಿತೀಶ ತಿಳಿಸಿದ್ದಾರೆ.
ರೈತರಿಂದ ಶೇಂಗಾ ಉತ್ಪನ್ನವನ್ನು ಪ್ರತಿ ಎಕರಿಗೆ ಮೂರು ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾವನ್ನು ಪ್ರತಿ ಕ್ವಿಂಟಾಲ್‌ಗೆ 6,783 ರೂ.ಗಳಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುವುದು.
ರೈತರ ನೊಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ರೈತರು ಫ್ರೂಟ್ಸ್ ಐ.ಡಿಯೊಂದಿಗೆ ಆಯಾ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ನೋಂದಣಿಮಾಡಿಕೊಂಡು ಶೇಂಗಾ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪಡಿಸಕೊಳ್ಳಬೇಕೆಂದು ನಿತೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.