ಬೆಂಬಲ ಬೆಲೆ ಯೋಜನೆಯಡಿ ನೋಂದಣಿಗೆ ಅರಿವು ಮೂಡಿಸಿ: ಸಂಸದ ಪ್ರಜ್ವಲ್ ರೇವಣ್ಣ ಸೂಚನೆ

ಬೆಂಬಲ ಬೆಲೆ ಯೋಜನೆಯಡಿ ನೋಂದಣಿಗೆ ಅರಿವು ಮೂಡಿಸಿ: ಸಂಸದ ಪ್ರಜ್ವಲ್ ರೇವಣ್ಣ ಸೂಚನೆ
Published on

   ಹಾಸನ:  ಬೆಂಬಲ ಬೆಲೆ ಯೋಜನೆಯಡಿ ರೈತರು ರಾಗಿ ಮಾರಾಟಕ್ಕಾಗಿ ನೋಂದಣಿ ಮಾಡಿಕೊಳ್ಳಲು ರೈತರಿಗೆ ಹೆಚ್ಚಿನ ಮಾಹಿತಿ ನೀಡುವಂತೆ ಸಂಸದ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ಮೊದಲನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಪ್ರಗತಿ ಪರಿಶೀಲನೆ (ದಿಶಾ) ಸಭೆ ನಡೆಸಿ ಮಾತನಾಡಿದ ಅವರು, ರೈತರು ನೋಂದಣಿಗಾಗಿ ಬಂದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಸಾಧ್ಯವಾಗದಿದ್ದಲ್ಲಿ ನಿಗದಿತ ಗಡುವಿನೊಳಗೆ ನೋಂದಣಿ ಮಾಡಿಸಲು ನಿಗಾ ವಹಿಸುವಂತೆ ತಿಳಿಸಿದರು.

ವಿವಿಧ ಯೋಜನೆಗಳಡಿ ಜನಪ್ರತಿನಿಧಿಗಳು ಆಯ್ಕೆ ಮಾಡಿದ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಲು ಲೀಡ್ ಬ್ಯಾಂಕ್ ನೊಂದಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸವಲತ್ತು ಒದಗಿಸುವಂತೆ ಹಾಗೂ ಬಾಲ್ಯ ವಿವಾಹ ತಡೆಗಟ್ಟಿ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವ ಸಂರ್ಭದಲ್ಲಿ ಅವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಸತಿ ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಕೆ ನಿಷೇಧಿಸುವಂತೆ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಇಂಟರ್ನೆಟ್ ಸಂಪರ್ಕ ಗ್ರಂಥಾಲಯದಲ್ಲಿ ಮಾತ್ರ ಇರಬೇಕು. ಹಾಗೆ ಸರ್ಕಾರಿ ಶಾಲೆಗಳಿಗೆ ಹಿಂದೆ ಊರಿನ ಪ್ರಮುಖರು ಜಾಗವನ್ನು ದಾನವಾಗಿ ನೀಡಿದ್ದಾರೆ. ಅವುಗಳ ದಾಖಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಸರಿಪಡಿಸಿ ಸಂಬಂಧಪಟ್ಟ ಶಾಲೆಗೆ ನೀಡಬೇಕು. ಕೆರೆ, ಸ್ಮಶಾನ ಹಾಗೂ ಸರ್ಕಾರಿ ಗೋಮಾಳ ಜಾಗಗಳ ಒತ್ತುವರಿಯನ್ನು ತೆರವುಗೊಳಿಸುವುದರ ಜತೆಗೆ ಅವುಗಳ ಸಂರಕ್ಷಣೆಗೆ ನಿಗಾ ವಹಿಸಿ ಎಂದು ಸೂಚಿಸಿದರು.

ಕಾನೂನು ಬಾಹಿರವಾಗಿರುವ ಮದ್ಯದ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ವಹಿಸಿ. ಕೆಲವು ಮದ್ಯದ ಅಂಗಡಿ ಕಡೆಗಳಲ್ಲಿ ಹೆಣ್ಣು ಮಕ್ಕಳು ಓಡಾಲು ತೊಂದರೆ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಲು ಸೂಚಿಸಿದರು. ಕಾನೂನು ಉಲ್ಲಂಘನೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಂಗಡಿ ನಿರ್ಮಾಣಕ್ಕೆ ಚನ್ನಾರಾಯಟ್ಟಣದ ನಗರ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರಿ ಅನುಮತಿ ನೀಡಿದ್ದು, ಸದರಿ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ತೆರವುಗೊಳಿಸಲು ಕ್ರಮ ಜರುಗಿಸುವಂತೆ ಸಂಸದರು ಸೂಚನೆ ನೀಡಿದರು.

ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರಿಗೆ 124 ಕೋಟಿ ರೂ. ಹಾಗೂ ಜೆಜೆಎಂ ಯೋಜನೆಯಡಿ 108 ಕೋಟಿ ರೂ. ಪಾವತಿಗೆ ಬಾಕಿಯಿದ್ದು, ಸರ್ಕಾರ ಸದರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಎಚ್.ಡಿ.ರೇವಣ್ಣ ಹಾಗೂ ಸಿ.ಎನ್. ಬಾಲಕೃಷ್ಣ ಅವರು ಒತ್ತಾಯಿಸಿದರು.

ಶಾಸಕ ಎಚ್.ಡಿ.ರೇವಣ್ಣ ಅವರು ಮಾತನಾಡಿ, ಬಿಸಿಎಂ ಇಲಾಖೆಯಡಿ ನಡೆಯುತ್ತಿರುವ ಪ್ರಿ ಮೆಟ್ರಿಕ್‌ನಲ್ಲಿ ಉಳಿದಿರುವ ಸೀಟುಗಳನ್ನು ಹೆಚ್ಚು ಬೇಡಿಕೆ ಪೋಸ್ಟ್ ಮೆಟ್ರಿಕ್‌ಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪರಿವರ್ತನೆ ಮಾಡಿ ಮಕ್ಕಳ ಪ್ರವೇಶಾತಿಗೆ ಅವಕಾಶ ನೀಡಿ ಎಂದು ಜಿಪಂ ಸಿಇಒಗೆ ತಿಳಿಸಿದರು. ಇದಕ್ಕೆ ಜಿಪಂ ಸಿಇಒ ಬಿ. ಆರ್. ಪೂರ್ಣಿಮಾ, ಸೀಟುಗಳ ಪರಿವರ್ತನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಕೆಲವು ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ಹೋಗುವುದಿಲ್ಲ. ಜತೆಗೆ ಕೆಲವು ಶಿಕ್ಷಕರು ಶಾಲೆಯಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟಿರುವ ಬಗ್ಗೆ ದೂರಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಿ ಕ್ರಮ ಜರುಗಿಸುವಂತೆ ತಿಳಿಸಿದರು. ಶಿಕ್ಷಕರು ಮನಸ್ಸು ಮಾಡಿದರೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ದೊಡ್ಡ ಮಟ್ಟದ ಸಾಧನೆ ಮಾಡುವಂತಹ ಮಕ್ಕಳನ್ನು ತಯಾರು ಮಾಡಬಹುದು. ಈ ನಿಟ್ಟಿನಲ್ಲಿ ಶಿಕ್ಷಕ ವೃಂದ ಮುಂದಾಗಬೇಕು. ಖಾಸಗಿ ಶಾಲೆಗಳಿಗೆ ಫೈಪೋಟಿ ನೀಡುವಂತೆ ಸರ್ಕಾರಿ ಶಾಲಾ ಮಕ್ಕಳನ್ನು ತಯಾರು ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿರುವ ಹಾಗೆ ನೋಡಿಕೊಳ್ಳಬೇಕು ಎಂದರು.

ಹಾಸನ ತಾಲ್ಲೂಕಿನ ಬೊಮ್ಮೆನಹಳ್ಳಿ ಹಾಗೂ ಹೊಳೆನರಸೀಪುರ ತಾಲ್ಲೂಕಿನ ಬೆಟ್ಟಸಾತೇನಹಳ್ಳಿಯಲ್ಲಿ ಜನರು 40 ವರ್ಷದಿಂದ ಉಳುಮೆ ಮಾಡುತ್ತಿದ್ದಾರೆ ಅವರ ಬಳಿ ಎಲ್ಲಾ ದಾಖಲೆಗಳು ಇದ್ದರೂ ಸಹ ಈಗ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಹೇಳುತ್ತಿದ್ದಾರೆ. ಇದನ್ನು ಜಂಟಿ ಸರ್ವೆ ಮಾಡಿ ಎಂದು ಹೆಚ್.ಡಿ.ರೇವಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net