ಬೆಂಬಲ ಬೆಲೆ ಕನ್ನಡಿಯೊಳಗಿನ ಗಂಟು!

h1- Farmers
Published on

ಹುಬ್ಬಳ್ಳಿ: ಪ್ರತಿ ವರ್ಷವೂ ಹೀಗೆಯೇ ಆಗುತ್ತದೆ. ಮುಂಗಾರಿನಲ್ಲಿ ರೈತರು ಬೆಳೆದ ಆಹಾರ ಧಾನ್ಯಗಳು ಎಪಿಎಂಸಿ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಹುತೇಕ ಮಾರಾಟವಾದ ಮೇಲೆ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸುತ್ತದೆ.

ಈ ವರ್ಷವೂ ಅದೇ ಆಗುತ್ತಿದೆ. ಈ ಬಾರಿ ಮುಂಗಾರಿನ ಪ್ರಮುಖ ಬೆಳೆ ಹೆಸರು ರೈತರ ಕೈ ಸೇರಿ ತಿಂಗಳಾಗುತ್ತ ಬಂದಿದೆ. ಮಾರುಕಟ್ಟೆಯಲ್ಲಿ ಹೆಸರು ಬೆಲೆ ಪಾತಾಳಕ್ಕೆ ಕುಸಿದಿದೆ. ಕೆಲವು ಎಪಿಎಂಸಿಯಲ್ಲಿ ವ್ಯಾಪಾರಸ್ಥರು ಬೇಕೆಂದೇ ಹೆಸರುಕಾಳಿನ ದರ ಇಳಿಸುತ್ತಿದ್ದಾರೆ. ಹೇಗಿದ್ದರೂ ಸೀಸನ್ ಇದೆ. ರೈತರು ಲಗುಬಗೆಯಿಂದ ಮಾರಾಟ ಮಾಡಿ ಹೋಗುತ್ತಾರೆ. ರೈತರ ಅವಸರವನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವರು ಹೆಸರಿಗೆ ಮನಸೋಇಚ್ಛೆ ದರ ನಿಗದಿ ಮಾಡಿ ಬೆಳೆಗಾರರಿಗೆ ನಷ್ಟ ಮಾಡುತ್ತಿದ್ದಾರೆ.

ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಸಹಜವಾಗಿ ಹೆಸರುಕಾಳು ಒಂದಿಷ್ಟು ಕೆಟ್ಟಿದೆ. ಅಳಿದುಳಿದ ಫಸಲನ್ನು ಹೇಗೋ ಮಳೆಯ ಮಧ್ಯೆ ಕಾಪಾಡಿಕೊಂಡು ಒಕ್ಕಣೆ ಮಾಡಿ ಮಾರುಕಟ್ಟೆಗೆ ತಂದರೆ ಎಪಿಎಂಸಿಗಳಲ್ಲಿ ಹೆಸರನ್ನು ಕಸದಂತೆ ಕಾಣುತ್ತಿದ್ದಾರೆ! ಹೆಸರುಕಾಳು ಸರಿ ಇಲ್ಲ, ಡ್ಯಾಮೇಜ್ ಆಗಿದೆ. ವಾಪಸ್ ತೆಗೆದುಕೊಂಡು ಹೋಗಿ ಎಂಬರ್ಥದಲ್ಲಿ ಕೆಲ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಇದರಿಂದ ವಿಚಲಿತವಾಗುತ್ತಿರುವ ಅನ್ನದಾತ, ಕೈಗೆ ಬಂದ ದರಕ್ಕೆ ಹೆಸರು ಮಾರಾಟ ಮಾಡುತ್ತಿದ್ದಾನೆ. ಹಾಗಾಗಿ ಎಪಿಎಂಸಿಗೆ ಹೆಸರು ತರುವ ರೈತರಿಗೆ ಈಗ ಮರ್ಯಾದೆ ಇಲ್ಲದಂತಾಗಿದೆ.

ಕನಿಷ್ಠ ಪಕ್ಷ ಸರ್ಕಾರ ಹೆಸರು ಬೆಳೆಗಾರರ ಸಮಸ್ಯೆ, ಸಂಕಷ್ಟಕ್ಕೆ ಸ್ಪಂದಿಸಿ ಕೂಡಲೆ ಖರೀದಿ ಕೇಂದ್ರ ಆರಂಭಿಸಿ ನೆರವಿಗೆ ಧಾವಿಸಬೇಕಾಗಿದೆ.

ಕೇಂದ್ರ ಸರ್ಕಾರವೇನೋ ಪ್ರತಿ ಕ್ವಿಂಟಾಲ್ ಹೆಸರಿಗೆ 7196 ರೂ. ಘೋಷಣೆ ಮಾಡಿದೆ. ಮಾರುಕಟ್ಟೆಯಲ್ಲಿ ದರ ಕುಸಿದಾಗ ರಾಜ್ಯ ಸರ್ಕಾರ ಕೂಡಲೆ ಖರೀದಿ ಕೇಂದ್ರ ಆರಂಭಿಸಬೇಕು. ಆದರೆ, ರಾಜ್ಯ ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ. ಯಾವುದೇ ಪ್ರಕ್ರಿಯೆ ನಡೆಸದೇ ಇರುವುದರಿಂದ ಬೆಂಬಲ ಬೆಲೆ ಎನ್ನುವುದು ರೈತರಿಗೆ ಕನ್ನಡಿಯೊಳಗಿನ ಗಂಟು ಎಂಬಂತಾಗಿದೆ.

ಸದ್ಯ ಹುಬ್ಬಳ್ಳಿ ಎಪಿಎಂಸಿಯಲ್ಲಿ ಹೆಸರುಕಾಳಿನ ಕನಿಷ್ಠ ಬೆಲೆ 2000 ರೂ.ಗೆ ಕುಸಿದಿದೆ. ತಿಂಗಳ ಹಿಂದಷ್ಟೇ ಅಂದರೆ ಮುಂಗಾರು ಬೆಳೆ ಬರುವ ಮೊದಲು ಹೆಸರಿನ ಬೆಲೆ ಕ್ವಿಂಟಾಲ್​ಗೆ ಏಳರಿಂದ ಎಂಟು ಸಾವಿರ ರೂ. ವರೆಗೆ ಇತ್ತು. ಎಲ್ಲ ರೈತರು ಹೆಸರು ಮಾರಾಟ ಮಾಡಿದ ಮೇಲೆ, ವ್ಯಾಪಾರಸ್ಥರ ಬಳಿ ಸ್ಟಾಕ್ ಆಗುತ್ತದೆ. ಆಗ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವುದೇ? ಎಂದು ರೈತರು ಆಕ್ರೋಶದಿಂದ ಕೇಳುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಸುಮಾರು 46 ಸಾವಿರ ಹೆಕ್ಟೇರ್​ನಲ್ಲಿ ಹೆಸರು ಬೆಳೆಯಲಾಗಿದ್ದು, ಅಂದಾಜು 3.4 ಲಕ್ಷ ಕ್ವಿಂಟಾಲ್ ಮಾರುಕಟ್ಟೆಗೆ ಆವಕವಾಗುವ ನಿರೀಕ್ಷೆ ಇದೆ.

ಹೆಸರುಕಾಳು ಬೆಂಬಲ ಬೆಲೆಯಡಿ ಖರೀದಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಖರೀದಿ ಕೇಂದ್ರ ಆರಂಭಿಸುವ ಕುರಿತು ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಅನುಮತಿ ನೀಡಿದ ಕೂಡಲೆ ಆರಂಭಿಸಲಾಗುವುದು.

| ನಿತೇಶ ಪಾಟೀಲ

ಜಿಲ್ಲಾಧಿಕಾರಿ, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net