ಬೆಂಗಳೂರು-ಹೊಸೂರು ಅಪಘಾತಗಳ ಹೆದ್ದಾರಿ!, ಏನೇ ರೂಲ್ಸ್ ಮಾಡಿದರೂ ಎಲ್ಲವೂ ಬ್ರೇಕ್

04ank news and photos 01(1)
Published on

ನವೀನ್ ಚಂದ್ರ ಶೆಟ್ಟಿ ಆನೇಕಲ್

ರಸ್ತೆ ಅಪಘಾತಗಳನ್ನು ತಪ್ಪಿಸಿ, ಪ್ರಾಣ ಉಳಿಸಲು ಸರ್ಕಾರ ನೂರಾರು ನಿಯಮಗಳನ್ನು ರೂಪಿಸಿ ಜಾರಿಗೊಳಿಸಿದೆ. ಅದರೆ, ನಿರ್ಲಕ್ಷ್ಯತನದಿಂದ ಈ ನಿಯಮಗಳನ್ನು ಉಲ್ಲಂಸುವ ಜನರು ಸುಲಭವಾಗಿ ಸಾವಿನ ಕದ ತಟ್ಟುತ್ತಿದ್ದಾರೆ.!

ಅವಘಡಗಳಿಗೆ ಕಾರಣವಾಗುತ್ತಿರುವ ಬೆಂಗಳೂರು-ಹೊಸೂರು ಹೆದ್ದಾರಿ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂಬುದು ವಿಜಯವಾಣಿ ದಿನಪತ್ರಿಕೆಯು ಬೆಂಗಳೂರು ಎಲಿವೇಟೆಡ್ ಟೋಲ್ ವೇ ಪ್ರೈವೇಟ್ ಲಿಮಿಟೆಡ್‌ನಿಂದ ಸಂಗ್ರಹಿಸಿರುವ ಮಾಹಿತಿಯಿಂದ ಬಹಿರಂಗಗೊಂಡಿದೆ.

ಮಡಿವಾಳ ರಸ್ತೆ ಕೊನೆಗೊಳ್ಳುವ ಸ್ಥಳದಿಂದ ಸಿಂಗ್ರಸಂದ್ರ ಆರಂಭವಾಗುವ ಅಪಘಾತ ವಲಯ ಕರ್ನಾಟಕ-ತಮಿಳುನಾಡು ಗಡಿ ಅತ್ತಿಬೆಲೆಯವರೆಗೂ ವಿಸ್ತರಿಸುತ್ತದೆ. ಅದರಲ್ಲೂ ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆ ಸುಗಮ ಸಂಚಾರ ಒದಗಿಸುವುದಕ್ಕಿಂತಲೂ ಅಪಘಾತಗಳಿಂದಾಗಿ ಕುಖ್ಯಾತಿ ಪಡೆಯುತ್ತಿದೆ!

ಅವೈಜ್ಞಾನಿಕ ಸಿಮೆಂಟ್ ಬ್ಯಾರಿಕೇಡ್ ಅಳವಡಿಕೆ: ಹೆದ್ದಾರಿಯುದ್ದಕ್ಕೂ ಎರಡೂ ಬದಿಯಲ್ಲಿ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ, ಗ್ರಾಮಗಳನ್ನು ಸಂಪರ್ಕಿಸುವಲ್ಲಿಯೂ ಬ್ಯಾರಿಕೇಡ್ ಅಳವಡಿಸಿರುವುದರಿಂದ, ಜನರು ಮತ್ತು ವಾಹನ ಸವಾರರು ಎಲ್ಲೆಂದರಲ್ಲಿ ರಸ್ತೆ ದಾಟಲು ಯತ್ನಿಸುವುದು ಸಾಮಾನ್ಯವಾಗಿದೆ. ಇದು ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆ. ಅವೈಜ್ಞಾನಿಕ ರಸ್ತೆ ಉಬ್ಬುಗಳ (ಹಂಪ್ಸ್) ನಿರ್ಮಾಣ, ಸ್ಪಷ್ಟವಾಗಿ ಗೋಚರಿಸದಂಥ ಪ್ರದೇಶದಲ್ಲಿ ಸಿಗ್ನಲ್‌ಗಳನ್ನು ಅಳವಡಿಸಿರುವುದು ಅಪಘಾತಗಳ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿವೆ.

ಚಂದಾಪುರ, ಬೊಮ್ಮಸಂದ್ರ, ಯಡವನಹಳ್ಳಿ, ಆರ್.ಕೆ. ಡಾಬಾ ಕ್ರಾಸ್, ನೆರಳೂರು, ತಿರುಮಗೊಂಡನಹಳ್ಳಿ ಬಳಿ ಆಗುತ್ತಿರುವ ಅಪಘಾತಗಳಿಗೆ ಲೆಕ್ಕವೇ ಇಲ್ಲ, ಅತ್ತಿಬೆಲೆ ಗಡಿಯಿಂದ ಚಂದಾಪುರದವರೆಗಿನ ಹದಿನೈದು ಕಿಲೋಮೀಟರ್ ರಸ್ತೆಯಲ್ಲಿ ಜನರು ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಜನರ ನಿಯಂತ್ರಣಕ್ಕೆ ಎತ್ತರದ ಬ್ಯಾರಿಕೇಡ್: ಜನರು ಎಲ್ಲೆಂದರಲ್ಲಿ ರಸ್ತೆ ದಾಟುವುದನ್ನು ತಡೆಯಲು ಹೆದ್ದಾರಿ ಮಧ್ಯೆದಲ್ಲಿ ಎತ್ತರದ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಸುರಕ್ಷತೆಗಾಗಿ ಹಂಪ್ಸ್ ಹಾಕಲಾಗಿದೆ. ಆದರೆ, ಈ ಮಾಹಿತಿ ಲಕಗಳನ್ನು ಅಳವಡಿಸದ ಕಾರಣ, ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಅಗತ್ಯವಾದ ಸ್ಥಳದಲ್ಲಿ ಜೀಬ್ರಾ ಕ್ರಾಸಿಂಗ್ ಮಾರ್ಕಿಂಗ್ ಮಾಡದಿರುವುದು, ಹೆಚ್ಚಿನ ಪ್ರತಿಲನ ಇಲ್ಲದ ಲಕಗಳನ್ನು ಅಳವಡಿಸಿರುವುದೂ ಅಪಘಾತಗಳಿಗೆ ಕಾರಣವಾಗುತ್ತಿದೆ.

ಚಂದಾಪುರ ಬಳಿ ಹೊಸೂರಿಗೆ ಹೋಗುವ ರಸ್ತೆಯಲ್ಲಿ ರೈಲ್ವೆ ಮಾರ್ಗ ಹಾದು ಹೋಗಿದೆ. ಹಲವು ವರ್ಷಗಳಿಂದ ಇಲ್ಲಿ ನೂರಾರು ಅಪಘಾತಗಳಾಗಿವೆ. ರಸ್ತೆ ಕಿರಿದಾಗಿರುವುದು ಇದಕ್ಕೆ ಕಾರಣ. ಹೆದ್ದಾರಿ ಪ್ರಾಧಿಕಾರ ಮತ್ತು ಭಾರತೀಯ ರೈಲ್ವೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ರಸ್ತೆ ವಿಸ್ತರಣೆ ಆಗುತ್ತಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ರಾಜ್ಯ ಸರ್ಕಾರಗಳಿಗೆ ಲಿಖಿತ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುರಳಿ, ಸ್ಥಳೀಯ ನಿವಾಸಿ

ಬೆಂಗಳೂರಿನ ಇತರ ಹೆದ್ದಾರಿಗಳಿಗೆ ಹೋಲಿಸಿದರೆ ನಮ್ಮ ಹೆದ್ದಾರಿ ಮತ್ತು ಮೇಲ್ಸೇತುವೆ ಅಪಘಾತರಹಿತವಾಗಿದೆ. 24/7 ಒಳ್ಳೆಯ ಸೇವೆ ಒದಗಿಸುತ್ತಿದ್ದೇವೆ. ಏನಾದರೂ ಸಮಸ್ಯೆ ಆದರೆ, ಟೋಲ್‌ಫ್ರೀ ನಂಬರ್‌ಗೆ ಕರೆ ಮಾಡಿದರೆ ಸ್ಪಂದಿಸುತ್ತೇವೆ.  ಬಲದೇವ್ ಸಿಂಗ್, ಬಿಇಟಿಪಿಎಲ್ ಮ್ಯಾನೇಜರ್

ಸತ್ತವರಲ್ಲಿ ಬೈಕ್ ಸವಾರರೇ ಹೆಚ್ಚು: ಹೆದ್ದಾರಿಯಲ್ಲಿ ಇದುವರೆಗೂ ಸಂಭವಿಸಿರುವ ಅಪಘಾತಗಳಲ್ಲಿ ಸತ್ತಿರುವವರಲ್ಲಿ ಬೈಕ್ ಸವಾರರ ಪಾಲು ಶೇ.90ಕ್ಕಿಂತಲೂ ಹೆಚ್ಚಾಗಿದೆ. ಇದರಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಸೇರಿ ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳು ಸತ್ತಿರುವುದೇ ಹೆಚ್ಚು. ಅವೈಜ್ಞಾನಿಕ ಡಿವೈಡರ್, ಸರ್ವೀಸ್ ರಸ್ತೆಯಲ್ಲಿ ಗುಂಡಿ, ಯೂಟರ್ನ್ ತೆಗೆದುಕೊಳ್ಳುವಲ್ಲಿ ಸೂಚನಾಫಲಕ ಇರದಿರುವುದು ಅಪಘಾತಗಳ ಹೆಚ್ಚಳಕ್ಕೆ ಕಾರಣ. ನೆಲದಡಿಯಲ್ಲಿ ಅನಿಲ ಕೊಳವೆಮಾರ್ಗ ಅಳವಡಿಕೆಗೆ ರಸ್ತೆ ಅಗೆದ ಜಾಗದಲ್ಲಿ ಬಿದ್ದಿರುವ ತಗ್ಗುಗಳಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಭಿವೃದ್ಧಿಪಡಿಸುತ್ತಿದ್ದಾರೆ. ಕೆಲವು ತೊಂದರೆಗಳು ಆಗುತ್ತಿರುವ ಬಗ್ಗೆ ಸ್ಥಳೀಯರು ಲಿಖಿತವಾಗಿ ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟವರ ಗಮನಕ್ಕೆ ತಂದು, ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಹೆದ್ದಾರಿ ಹಾದು ಹೋಗಿದೆ. ಈ ಭಾಗದ ಜನರ ಸುರಕ್ಷತೆಗೆ ಹೆದ್ದಾರಿ ಪ್ರಾಧಿಕಾರದವರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮೊದಲು ನಿರ್ಮಿಸಬೇಕು. ಜನರ ಜೀವದ ಜತೆ ಚೆಲ್ಲಾಟ ಆಡಬಾರದು. ಬಿ. ಶಿವಣ್ಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net