

ಕಲಬುರಗಿ: ಬೆಂಗಳೂರು-ಕಲಬುರಗಿ-ಬೆಂಗಳೂರು ನಡುವೆ ಸೇವೆ ಒದಗಿಸುತ್ತಿರುವ ಸ್ಟಾರ್ ಏರ್ ಸಂಸ್ಥೆ ಇದೀಗ ತನ್ನ ಸೇವೆಯನ್ನು ದೆಹಲಿವರೆಗೂ ವಿಸ್ತರಿಸಿದೆ. ವಾರಕ್ಕೆ ಮೂರು ದಿನ ಕಲಬುರಗಿಯಿಂದ ಹುಬ್ಬಳ್ಳಿ ಮತ್ತು ದೆಹಲಿಗೆ ಸಂಪರ್ಕ ಸಾಧ್ಯವಾಗಲಿದೆ.
ಕಲಬುರಗಿಯಿಂದ ಬೆಂಗಳೂರಿಗೆ ಬೆಳಗ್ಗೆ 10.20ಕ್ಕೆ ಹೊರಡುವ ವಿಮಾನ ಬೆಂಗಳೂರಿನಿಂದ ಮರಳಿ ಹುಬ್ಬಳ್ಳಿಗೆ ಬರಲಿದೆ. ಅಲ್ಲಿಂದ ದೆಹಲಿ (ಹಿಂಡಾನ್)ಗೆ ತೆರಳಲಿದೆ. ಕಲಬುರಗಿಯಿಂದ ದೆಹಲಿಗೆ ತೆರಳಲು ಎರಡು ನಿಲುಗಡೆ ಇರಲಿವೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರರಾವ್ ವಿಜಯವಾಣಿಗೆ ತಿಳಿಸಿದರು. ಪ್ರತಿ ಸೋಮವಾರ, ಶುಕ್ರವಾರ ಮತ್ತು ಭಾನುವಾರ ದೆಹಲಿಗೆ ಹೋಗಲು ಅನುಕೂಲವಾಗಿದೆ.
ಬಹುದಿನಗಳಿಂದ ದೆಹಲಿಗೆ ವಿಮಾನ ಹಾರಾಟ ನಡೆಸಬೇಕು ಎಂಬುದು ಜನರ ಒತ್ತಾಸೆಯಾಗಿತ್ತು. ಅದಕ್ಕೀಗ ಕಾಲ ಕೂಡಿ ಬಂದಿದೆ. ಆದರೂ ಈ ವಿಮಾನ ಕಲಬುರಗಿಯಿಂದ ನೇರವಾಗಿ ಹಿಂಡಾನ್ಗೆ ಹೋಗದ್ದರಿಂದ ಸುಮಾರು ನಾಲ್ಕೂವರೆ ತಾಸು ಪಯಣಿಸಬೇಕಾಗುತ್ತದೆ. ಕಲಬುರಗಿಯಿಂದಲೇ ನೇರವಾಗಿ ಹಾರಿದರೆ ಎರಡು ಗಂಟೆಯಲ್ಲಿ ದೆಹಲಿಗೆ ತಲುಪಬಹುದು. ಮುಂಬಯಿಗೂ ಶೀಘ್ರದಲ್ಲಿ ವಿಮಾನ ಶುರುವಾಗುವ ಸಾಧ್ಯತೆ ಇದೆ.
ಕಲಬುರಗಿಯಲ್ಲಿ ಶೀಘ್ರ ತರಬೇತಿ ಶಾಲೆ: ಕಲಬುರಗಿಯಲ್ಲಿ ವಿಮಾನ ಚಾಲನಾ ತರಬೇತಿ ಶಾಲೆ (ಪ್ಲೈಯಿಂಗ್ ಸ್ಕೂಲ್) ಶೀಘ್ರ ಆರಂಭಗೊಳ್ಳಲಿದೆ. ವಿಮಾನ ನಿಲ್ದಾಣ ಉದ್ಘಾಟನೆಗೊಂಡು ಜನರ ಬಹುದಿನಗಳ ಕನಸು ನನಸಾಗಿದೆ. ಅದೇ ಹೊತ್ತಿನಲ್ಲಿ ಹೈದರಾಬಾದ್ ಜಿಎಂಆರ್ ಇಲ್ಲವೇ ಏಷಿಯನ್ ಪೈಯಿಂಗ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ನವರು ವಿಮಾನ ತರಬೇತಿ ಆರಂಭಿಸಲು ಮುಂದಾಗಿದ್ದರು. ಆದರೆ ರಾಜ್ಯ ಸಕರ್ಾರದ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ವಿಧಿಸಿದ ನಿಯಮಗಳಿಂದ ಹಿಂದೇಟು ಹಾಕಿದ್ದರು. ಇದೀಗ ಕಲಬುರಗಿ ನಿಲ್ದಾಣ ಭಾರತೀಯ ವಿಮಾನ ಪ್ರಾಧಿಕಾರಕ್ಕೆ ಹಸ್ತಾಂತರವಾಗಿದ್ದರಿಂದ ದೇಶದ ಬೇರೆ ಕಡೆಗಳಂತೆ ಫ್ಲೈಯಿಂಗ್ ಸ್ಕೂಲ್ ಆರಂಭಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.