

ಹಾಸನ : ಬೆಂಗಳೂರು -ಮಂಗಳೂರು ಚತುಷ್ಪಥ ರಾಷ್ಟೀಯ ಹೆದ್ದಾರಿ 75 ಕಾಮಗಾರಿ ಅವೈಜ್ಞಾನಿಕ ವಾಗಿ ಮಾಡಲಾಗುತ್ತಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್‌ಮಾತನಾಡಿ, ಹಾಸನದಿಂದ ಸಕಲೇಶಪುರ ರಾಷ್ಟೀಯ ಹೆದ್ದಾರಿಯ ಸಂಪೂರ್ಣ ಅವೈಜ್ಞಾನಿಕವಾಗಿದೆ, ಕೂಡಲೇ ಕೇಂದ್ರ ಸರ್ಕಾರ ಕಾಮಗಾರಿ ಕುರಿತು ತನಿಖೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾಗೂ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿಯೂ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಜನರಲ್ಲಿ ಸರ್ಕಾರದ ಮೇಲಿನ ನಂಬಿಕೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು. ಅವೈಜ್ಞಾನಿಕ ರಸ್ತೆ ಕಾಮಗಾರಿ ಬಗ್ಗೆ ಕ್ರಮವಹಿಸುವಂತೆ ಹಲವಾರು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿದ್ದರೂ ರಾಜ್ಯಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಈಗಾಗಲೇ ಬೆಂಗಳೂರಿಂದ ಹಾಸನ ಮಾರ್ಗದಲ್ಲಿ ಶೇ. 80 ರಷ್ಟು ಕಾಮಗಾರಿಪೂರ್ಣಗೊಂಡಿದ್ದು ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಹುತೇಕ ಕಡೆ ರಸ್ತೆ ಹಾಳಾಗಿದೆ ಎಂದು ದೂರಿದರು .
ಹಾಸನದಿಂದ ಸಕಲೇಶಪುರ ಮಾರ್ಗವಾಗಿ ಈಗಾಗಲೇ ಪೂರ್ಣಗೊಂಡಿರುವ ರಸ್ತೆ ಬದಿಯ ಗೋಡೆಗಳು ಕುಸಿದಿದ್ದು ಅವೈಜ್ಞಾನಿಕ ಕಾಮಗಾರಿಯಿಂದ ಸಕಲೇಶಪುರ ಬಳಿಯ ಮಂಜರಾಬಾದ್ ಕೋಟೆ ಕೂಡ ಕುಸಿಯುವ ಭೀತಿ ಉಂಟಾಗಿದ್ದು, ಆಲೂರು ಸಕಲೇಶಪುರ ಭಾಗದ ಪಶ್ಚಿಮ ಘಟ್ಟಗಳ ಲ್ಲಿ ಅಕ್ರಮ ಗಣಿಗಾರಿಕೆ ಹಿನ್ನೆಲೆ ಕಾಡಿನಿಂದ ನಾಡಿಗೆ ಬರುವ ಕಾಡಾನೆ ದಾಳಿಯಿಂದ ಬೆಳೆ ನಾಶವಾಗಿ ಕಂಗಾಲಾಗಿದ್ದಾರೆ, ಅಲ್ಲದೆ ವ್ಯಾಪಾರ ವ್ಯವಹಾರಗಳು ಕುಂಠಿತವಾಗಿದೆ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಸಮಸ್ಯೆಯ ಗಂಭೀರ ತೆಯನ್ನು ಅರಿತು ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಕರವೇ ಸದಸ್ಯರಾದ ಬೋಜೆಗೌಡ, ರಮೇಶ್ ಪೂಜಾರಿ, ಸುಧಾ, ಪ್ರಧಾನ್, ವೆಂಕಟೇಶ್ ಗೌಡ, ಸುರೇಶ್, ನಿತಿನ್ ಗೌಡ, ಬಸವರಾಜ್ ಬೆಳಗೂಡು ಸೇರಿದಂತೆ ಇತರರು ಇದ್ದರು.