ಬೆಂಗಳೂರು ಪ್ರಸಿದ್ಧಿಯಾಗಲು ನಾಡಪ್ರಭು ಕಾರಣ

27 HANUR 3
Published on

ಹನೂರು: ಬೆಂಗಳೂರು ವಿಶ್ವ ಮಟ್ಟದಲ್ಲಿ ಹೆಸರುವಾಸಿಯಾಗಲು ನಾಡಪ್ರಭು ಕೆಂಪೇಗೌಡ ಅವರೇ ಮೂಲ ಕಾರಣ ಎಂದು ಮಾಜಿ ಶಾಸಕ ಆರ್.ನರೇಂದ್ರ ಹೇಳಿದರು.


ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ಕೆಂಪೇಗೌಡ ಅವರು 16ನೇ ಶತಮಾನದಲ್ಲಿಯೇ ಬೆಂಗಳೂರು ಪಟ್ಟಣದ ನಿರ್ಮಾಣಕ್ಕೆ ಅಡಿಗಲ್ಲು ನೆಟ್ಟು ಮಹಾನಗರ ನಿರ್ಮಾಣದ ಕನಸು ಕಂಡಿದ್ದರು. ಆ ದಿನಗಳಲ್ಲಿಯೇ ವ್ಯವಹಾರಕ್ಕೆ ಒಂದು ರಸ್ತೆ, ವಾಸಕ್ಕೆ ಪ್ರತ್ಯೇಕ ಬಡಾವಣೆಗಳನ್ನು ನಿರ್ಮಾಣ ಮಾಡಿ ಕರಕುಶಲ ಕರ್ಮಿಗಳು, ವ್ಯಾಪಾರಿಗಳಿಗೆ ಪೇಟೆಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದ ದಕ್ಷ ಆಡಳಿತಗಾರ. ಹಾಗಾಗಿ ಬೆಂಗಳೂರು ನಿರ್ಮಾಣದಲ್ಲಿ ಇವರ ಪಾತ್ರ ಅಪಾರ. ಈ ದಿಸೆಯಲ್ಲಿ ಇಂದು ಬೆಂಗಳೂರು ವಿವಿಧ ರಂಗಗಳಲ್ಲಿ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದುವ ಮೂಲಕ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇದರಿಂದ ಕೆಂಪೇಗೌಡ ಅವರು ದಿಟ್ಟ, ದೂರದೃಷ್ಟಿಯ ಆಡಳಿತಗಾರ ಎನಿಸಿಕೊಂಡಿದ್ದಾರೆ ಎಂದು ತಿಳಿಸಿದರು.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ತಪ್ಪುಗಳಿಂದಾಗಿ ಸೋಲುಂಟಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆದರೆ ಯಾವುದೇ ಕಾರಣಕ್ಕೂ ಆತ್ಮಸೈರ್ಯ ಕಳೆದುಕೊಳ್ಳಬಾರದು. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಮಿಸಲಿದೆ. ಆದ್ದರಿಂದ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕಿದ್ದು, ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ಮಹಿಳಾ ಘಟಕದ ಅಧ್ಯಕ್ಷೆ ಅತಿಯಾಬಾನು, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು, ಪ.ಪಂ. ಸದಸ್ಯರಾದ ಗಿರೀಶ್, ಸುದೇಶ್, ಸಂಪತ್‌ಕುಮಾರ್, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಸಿದ್ದರಾಜು, ನಟರಾಜು, ಮಹದೇವ, ರಂಗಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net