

ಚಾಮರಾಜನಗರ: ನಾಡಪ್ರಭು ಶ್ರೀಕೆಂಪೇಗೌಡರ ದೂರದೃಷ್ಟಿಯ ಲವಾಗಿ ಬೆಂಗಳೂರು ವಿಶ್ವದಲ್ಲೇ ಬೃಹದಾಕಾರವಾಗಿ ಬೆಳೆಯುವಂತಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ಬಣ್ಣಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ನಾಡಪ್ರಭು ಶ್ರೀಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕರ್ನಾಟಕದ ರಾಜಧಾನಿ ಬೆಂಗಳೂರು ಬೆಳವಣಿಗೆಯಲ್ಲಿ ನಾಡಪ್ರಭು ಶ್ರೀಕೆಂಪೇಗೌಡರ ಶ್ರಮವಿದೆ. ಅವರ ದೂರದೃಷ್ಟಿತ್ವವನ್ನು ನೆನಪಿಸಿಕೊಂಡಾಗ ಅಚ್ಚರಿಯಾಗುತ್ತದೆ. ಬೆಂಗಳೂರಿನಲ್ಲಿ ಪ್ರತಿಯೊಂದು ಸಮುದಾಯದವರಿಗೂ ಪತ್ಯೇಕ ಪೇಟೆಗಳನ್ನು ನಿರ್ಮಾಣ ಮಾಡುವ ಮೂಲಕ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟರು. ಅನೇಕ ಕೆರೆ-ಕಟ್ಟೆಗಳನ್ನು ನಿರ್ಮಾಣ ಮಾಡಿ ಜನರಿಗೆ ಸಹಕಾರಿಯಾದರು. ಅವರ ಸೇವೆ ಇಂದಿಗೂ ಸ್ಮರಣೀಯ ಎಂದರು.
ವಿಶ್ವದಲ್ಲೇ ಬೆಂಗಳೂರು ಬೃಹದಾಕಾರವಾಗಿ ಬೆಳೆದಿದ್ದು, ಅದಕ್ಕೆ ಕೆಂಪೇಗೌಡ ಅವರ ದೂರದೃಷ್ಟಿಯೇ ನೇರ ಕಾರಣವಾಗಿದೆ. ಇದರಿಂದ ಕೋಟ್ಯಾಂತರ ಜನರು ಜೀವನವನ್ನು ಕಟ್ಟಿಕೊಂಡಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳಿಂದ ಪ್ರತಿಯೊಬ್ಬರು ಮನಸ್ಸಿನಲ್ಲೂ ಕೆಂಪೇಗೌಡರು ಉಳಿದುಕೊಂಡಿದ್ದಾರೆ. ಅವರ ಕೊಡುಗೆಗಳನ್ನು ನೆನೆಯುವುದರ ಜತೆಗೆ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಚಾಮರಾಜನಗರ, ಹನೂರು, ಗುಂಡ್ಲುಪೇಟೆ ತಾಲೂಕಿನಲ್ಲಿ ಮಾತ್ರ ನೆಲೆಸಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಇದ್ದರೂ, ಉತ್ತಮವಾಗಿ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಚಾಮರಾಜನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಸಮುದಾಯ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶ್ರೀರಂಗ ಪಟ್ಟಣದ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಒಕ್ಕಲಿಗರು ಹಲವಾರು ಕಾಲ ಈ ನೆಲವನ್ನು ಆಳ್ವಿಕೆ ಮಾಡಿದ್ದಾರೆ. ಶ್ರೀಕೆಂಪೇಗೌಡರ ಜಾತಿಯನ್ನು ಮೀರಿದ ಅಭಿವೃದ್ಧಿ ಕೆಲಸಗಳಿಂದಾಗಿ ಒಕ್ಕಲಿಗ ಸಮುದಾಯ ಪ್ರತಿಯೊಂದು ಸಮುದಾಯಗಳು ಗೌರವದಿಂದ ಕಾಣುತ್ತದೆ. ಇದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಆದಿ ಚುಂಚನಗಿರಿ ಸಂಸ್ಥಾನ ಮಠದ ಶ್ರೀ ಸೋಮನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ (ಮುನ್ನಾ), ಮಾನಸ ವಿದ್ಯಾಸಂಸ್ಥೆ ಕಾರ್ಯದರ್ಶಿ ದತ್ತೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಗಂಗಾಧರ್, ಶ್ರೀಧರ್, ಎಂ.ಬಿ.ಮಂಜೇಗೌಡ, ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ, ಅಧ್ಯಕ್ಷ ಸುದರ್ಶನ್ ಗೌಡ, ಉಪಾಧ್ಯಕ್ಷ ಚಿನ್ನಮುತ್ತು, ಮುಖಂಡರಾದ ಪ್ರಸಾದ್, ಸತೀಶ್ ಹಾಗೂ ಇತರರು ಹಾಜರಿದ್ದರು.
ಜಾತಿಯನ್ನು ಮೀರಿದ ಆಡಳಿತ:
ನಾಡಪ್ರಭು ಶ್ರೀಕೆಂಪೇಗೌಡ ಅವರು ಪ್ರತಿಯೊಂದು ಸಮುದಾಯಗಳಿಗೂ ಪ್ರತ್ಯೇಕ ಪೇಟೆಗಳನ್ನು ಹಾಗೂ ದೇವಾಲಯಗಳನ್ನು ನಿರ್ಮಾಣ ಮಾಡುವ ಮೂಲ ಜಾತಿಯನ್ನು ಮೀರಿದ ಆಡಳಿತವನ್ನು ನಡೆಸಿದ್ದಾರೆ ಎಂದು ಮೈಸೂರಿನ ಸುಯೋಗ ಆಸ್ಪತ್ರೆ ಅಧ್ಯಕ್ಷ ಹಾಗೂ ಸಾಹಿತಿ ಡಾ.ಎಸ್.ಪಿ.ಯೋಗಣ್ಣ ಹೇಳಿದರು. ರಾಜ್ಯದಲ್ಲಿ 700 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಗಂಗರು ಕೂಡ ಒಕ್ಕಲಿಗರಾಗಿದ್ದು, ಈ ದೇಶದ ಮೂಲ ಪುರುಷರಾಗಿದ್ದಾರೆ. ಈ ಮೂಲಕ ಒಕ್ಕಲಿಗರನ್ನು ಶೂದ್ರ ಸಮಾಜದ ಬೇರು ಎಂದು ಕರೆಯಲಾಗುತ್ತದೆ. ಒಕ್ಕಲಿಗ ಸಮುದಾಯದ ರಾಜ ಶ್ರೀಕೆಂಪೇಗೌಡರು ತಮ್ಮ ಆಡಳಿತದ ಅವಧಿಯಲ್ಲಿ ನಿರ್ಮಾಣ ಮಾಡಿದ ಬೆಂಗಳೂರು ಇಂದು ಜಗತ್ತಿನಲ್ಲೇ ಹೆಸರುವಾಸಿಯಾಗಿದೆ. ಪ್ರಸ್ತುತ ವಾಣಿಜ್ಯೋದ್ಯಮದ ಬಹುದೊಡ್ಡ ನಗರವಾಗಿದ್ದು, ಕೋಟ್ಯಾಂತರ ಜನರಿಗೆ ಆಶ್ರಯವನ್ನು ನೀಡಿದೆ. ಬೆಂಗಳೂರಿನ ಎಲ್ಲಾ ಶ್ರೇಯಸ್ಸು ನಾಡಪ್ರಭು ಕೆಂಪೇಗೌಡ ಅವರಿಗೆ ಸಲ್ಲಬೇಕು. ಅವರ ಕೊಡುಗೆ ಸದಾಕಾಲವೂ ಸ್ಮರಣೀಯ ಎಂದು ಹೇಳಿದರು.
ಭಾವಚಿತ್ರ ಮೆರವಣಿಗೆ:
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಪ್ರಾರಂಭವಾದ ನಾಡಪ್ರಭು ಶ್ರೀಕೆಂಪೇಗೌಡ ಭಾವಚಿತ್ರ ಮೆರವಣಿಗೆಗೆ ಸಮುದಾಯದ ಗಣ್ಯರು ಚಾಲನೆ ನೀಡಿದರು. ಅಲ್ಲಿಂದ ಹೊರಟು ಮೆರವಣಿಗೆ ಶ್ರೀಭವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿ ವೇದಿಕೆ ಕಾರ್ಯಕ್ರಮ ನಡೆದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಅಂತ್ಯವಾಯಿತು. ವಿವಿಧ ಗ್ರಾಮದವರು ವಾಹನಗಳಲ್ಲಿ ಭಾವಚಿತ್ರಗಳನ್ನು ಅಳವಡಿಸಿಕೊಂಡು ಬಂದಿದ್ದ ಭಾವಚಿತ್ರಗಳು ಗಮನಸೆಳೆಯಿತು. ವೀರಗಾಸೆ, ಕಂಸಾಳೆ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿತು. ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ವಿವಿಧ ೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಧ್ವನಿಸುರುಳಿ ಬಿಡುಗಡೆ:
ನಾಡಪ್ರಭು ಶ್ರೀಕೆಂಪೇಗೌಡ ಅವರ ಕುರಿತಾದ ಧ್ವನಿಸುರಳಿಯನ್ನು ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ನಗರಸಭಾ ಸದಸ್ಯ ಸುದರ್ಶನ್‌ಗೌಡ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಕೆಂಪೇಗೌಡ ಕುರಿತಾದ ಗೀತೆಯನ್ನು ಕೆಲನಟರಾಜ್ ಅವರು ರಚಿಸಿದ್ದು, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಧ್ವನಿಯಾಗಿದ್ದಾರೆ. ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲೆಯಲ್ಲಿ ಒಕ್ಕಲಿಗರ ಸಂಖ್ಯೆ ಕಡಿಮೆ ಇದ್ದು, ಹನೂರು ಭಾಗದಲ್ಲಿ ಮಾತ್ರ ಹೆಚ್ಚಾಗಿದ್ದೇವೆ. ಆದರೂ ಈ ವರೆಗೂ ಸಮುದಾಯದ ಓರ್ವ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಲ್ಲ. ಈ ಕಾರಣದಿಂದ ಜಿಲ್ಲಾಮಟ್ಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಮುಂದಿನ ದಿನಗಳಲ್ಲಿ ಒಂದು ನಿಯೋಗ ಹೋಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಮಾಡಬೇಕು. ಸಮುದಾಯ ಒಂದಾದರೆ ಅವಕಾಶ ಸಾಧ್ಯವಾಗುತ್ತದೆ.
-ಆರ್.ನರೇಂದ್ರ, ಮಾಜಿ ಶಾಸಕ, ಹನೂರು