

ಮೈಸೂರು: ಪಾಠ ಪುಸ್ತಕಗಳ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳು ಹೆಚ್ಚುವರಿ ಕೌಶಲ ಮತ್ತು ಅನುಭವ ಸಂಪಾದಿಸಿದಾಗ ಮಾತ್ರ ಉದ್ಯೋಗಾವಕಾಶ ತೆರೆದುಕೊಳ್ಳುತ್ತವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾಶಂಕರ್ ಹೇಳಿದರು.
ಮೈಸೂರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ದಶಮಾನೋತ್ಸವ ಹಾಗೂ ಮೊದಲನೇ ವರ್ಷದ ಬಿಇ ವಿದ್ಯಾರ್ಥಿಗಳ ಪ್ರವೇಶೋತ್ಸವದ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪದವಿ ಮುಗಿದ ತಕ್ಷಣ ಕೆಲಸ ಸಿಗುವುದಿಲ್ಲ. ಅದಕ್ಕಾಗಿ ತರಗತಿಗಳ ಹೊರಗೂ ಕಲಿಯುವ ಮನೋಭಾವ ಇರಬೇಕು ಎಂದರು.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನೇರ ಅನುಭವ ಪಡೆಯಲು ಬೆಂಗಳೂರಿನ ವಿಟಿಯು ಕ್ಯಾಂಪಸ್‌ನಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಅದಕ್ಕೆ ಹೊಂದಿಕೊಳ್ಳದೆ ಇದ್ದರೆ ಉದ್ಯೋಗ ಕ್ಷೇತ್ರದಲ್ಲಿ ಉಳಿಯುವುದು ಕಷ್ಟ. ಮರು ಕೌಶಲ, ಜಾಗತಿಕ ಸ್ಪರ್ಧಾತ್ಮಕತೆ ಹಾಗೂ ಹೊಸ ಆವಿಷ್ಕಾರಗಳ ಅರಿವು ಅತ್ಯಂತ ಮುಖ್ಯ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಇತ್ತೀಚಿನ ಸಾಧನೆಗಳನ್ನು ಹಂಚಿಕೊಂಡ ಅವರು, 2024-25ರಲ್ಲಿ ವಿಟಿಯು 11 ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದ್ದು, ಇದರಲ್ಲಿ ಇಕಾನಾಮಿಕ್ ಟೈಮ್ಸ್ ಎಡ್ಯೂಟೆಕ್ ಹಾಗೂ ಐಐಟಿ ಮುಂಬೈಯಿಂದ ಬಂದ ಗೌರವಗಳು ಸೇರಿವೆ ಎಂದರು. ಅಲ್ಲದೆ, ಸಿಮೆನ್ಸ್ ಕಂಪನಿಯೊಂದಿಗೆ ಕೈಗಾರಿಕಾ ಸಹಕಾರ ಬಲಪಡಿಸಲು ಸಮಜೋತಾ ಒಪ್ಪಂದ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಸ್ತಾಪ ಮಾಡಿದ ಅವರು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ರೆಡಿಟ್ ಹಾಗೂ ಆನ್‌ಲೈನ್ ಕೋರ್ಸ್ ಮೂಲಕ ಆನರ್ ಮತ್ತು ಮೈನರ್ ಡಿಗ್ರಿ ಪಡೆಯುವ ಅವಕಾಶವಿದೆ ಎಂದರು.
ಇಂಟರ್ನ್‌ಶಿಪ್‌ಗಳು, ಮಿಶ್ರ ಕಲಿಕೆ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಹೀಗಿನ ಹೊಸ ಕ್ಷೇತ್ರಗಳಲ್ಲಿ ಅನುಭವ ಅಗತ್ಯ ಎಂದು ಒತ್ತಿ ಹೇಳಿದರು.
ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಬುದ್ಧಿಮತ್ತೆ ಮತ್ತು ಹಠಮಾರಿತನವೇ ಯಶಸ್ಸಿನ ದಾರಿ. ನವೀಕರಿಸಿದ ಕೌಶಲ ಹೊಂದಿದವರಿಗೆ ಅಪಾರ ಉದ್ಯೋಗಾವಕಾಶಗಳಿವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷೆ ಚಂದನಾ ವಿದ್ಯಾಶಂಕರ್, ಉಪಾಧ್ಯಕ್ಷ ಆರ್.ಎಂ.ಮಹಾಲಿಂಗೇಗೌಡ, ಖಜಾಂಚಿ ರಾಮಲಿಂಗಯ್ಯ, ಕಾರ್ಯದರ್ಶಿ ನಂದಿನಿ ಎನ್.ಮೂರ್ತಿ, ಕಾರ್ಯದರ್ಶಿ ಬಿ.ಹೇಮಾವತಿ, ಪ್ರಾಂಶುಪಾಲ ಕೆ.ಎಸ್.ಅಭಿನಂದನ್ ಉಪಪ್ರಾಂಶುಪಾಲ ಎನ್.ನಕುಲ್ ಉಪಸ್ಥಿತರಿದ್ದರು.