

ಹಲಗೂರು: ಮುಂದಿನ ಪೀಳಿಗೆಯ ದೃಷ್ಟಿಯನ್ನು ಇಟ್ಟುಕೊಂಡು ಕೆಂಪೇಗೌಡರು ನಿರ್ಮಿಸಿದ ಬೆಂದಕಾಳೂರು ಈಗಿನ ಬೆಂಗಳೂರು ಆಗಿದೆ. ಅಲ್ಲದೆ ಕೆರೆಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಂತರ್ಜಲ ಹೆಚ್ಚಳಕ್ಕೆ ಶ್ರಮಿಸಿದ್ದು, ಬೆಂಗಳೂರಿನ ಕೋಟ್ಯಂತರ ಜನರಿಗೆ ದಾರಿದೀಪವಾಗಿದ್ದಾರೆ ಎಂದು ಮೈಸೂರಿನ ಸಹಾಯಕ ಪ್ರಾಧ್ಯಾಪಕ ಡಾ.ಭೀಮ್ ರಾಜ್ ಈರೇಗೌಡ ತಿಳಿಸಿದರು.
ಹಲಗೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೆಂಪೇಗೌಡರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಈಗ ಬೃಹದಾಕಾರವಾಗಿ ಬೆಳೆದಿದ್ದು, ಇದರ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಕೇವಲ ಒಕ್ಕಲಿಗ ಸಮಾಜಕ್ಕೆ ತಮ್ಮ ಸೇವೆ ಸೀಮಿತಗೊಳಿಸಿಕೊಳ್ಳದೆ, ಸಮಾಜದ ಎಲ್ಲ ವರ್ಗಗಳನ್ನು ಸಮಾನ ದೃಷ್ಟಿಯಲ್ಲಿ ಕಂಡ ಮಹಾನ್ ನಾಯಕ. ಕೆಂಪೇಗೌಡರ ಚರಿತ್ರೆ ಪುಸ್ತಕಗಳನ್ನು ಓದಿ, ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ನಡೆದರೆ ಮಾತ್ರ ಕೆಂಪೇಗೌಡರ ಜಯಂತಿ ಅರ್ಥಪೂರ್ಣವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವೈಭವ್ ಕಿರಣ್, ರಶ್ಮಿತಾ, ತೇಜಸ್ವಿನಿ, ಪುಣ್ಯಶ್ರೀ, ವಿನುತಾ ಮನೋಹರಿ, ಚೈತನ್ಯಾ, ಯೋಗಿತಾ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ.ರಾಮು, ನಾಗೇಶ್, ರಾಮಚಂದ್ರ, ಆನಂದ್ ಕುಮಾರ, ಎ.ಎಸ್.ದೇವರಾಜು, ಶಿವು, ಎ.ಟಿ.ಶ್ರೀನಿವಾಸ್, ಎನ್.ಕೆ. ಕುಮಾರ್, ಎಚ್.ಎಸ್.ಶಿವಲಿಂಗು, ಚಂದನ್, ನಿಂಗರಾಜು, ಶಿವರಾಜು, ಪ್ರಶಾಂತ್, ಸುರೇಂದ್ರ ಇತರರು ಇದ್ದರು.