ಬೆಂಗಳೂರಿನ ಗಾಂಧಿಭವನದ ಗಿಡಮರಗಳಿಗೆ ಶಾಂತವೇರಿ ಗೋಪಾಲಗೌಡರ ನೆಲದ ಮಣ್ಣು

TTH WEB
Published on

ತೀರ್ಥಹಳ್ಳಿ: ಬೆಂಗಳೂರಿನ ಗಾಂಧಿಭವನದಲ್ಲಿ ಆ.21ರಂದು ನಡೆಯುವ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮಶತಾಬ್ದಿಗೆ ಹೊರಟ ಜಾಥಾಕ್ಕೆ ಶಾಂತವೇರಿಯ ಗ್ರಾಮಸ್ಥರು ಗೋಪಾಲಗೌಡರ ಜನ್ಮಸ್ಥಳ ಮಣ್ಣನ್ನು ನೀಡುವ ಮೂಲಕ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.

ಜಾಥಾ ನೇತೃತ್ವ ವಹಿಸಿರುವ ಶಿವಾನಂದ ಕುಗ್ವೆ ಮಾತನಾಡಿ, ಗೋಪಾಲಗೌಡರು ಕರ್ನಾಟಕದಲ್ಲಿ ಸಮಾಜವಾದಿ ಚಳವಳಿಯ ನೇತೃತ್ವ ವಹಿಸುವ ಮೂಲಕ ಭೂ ಮಾಲೀಕರ ದೌರ್ಜನ್ಯವನ್ನು ಮೆಟ್ಟಿನಿಂತು ಗೇಣಿದಾರರ ಪರವಾಗಿ ಹೋರಾಡಿ, ಗೇಣಿದಾರ ಕುಟುಂಬಗಳಿಗೆ ಬದುಕು ನೀಡಿದ ಮಹನೀಯ. ಅವರ ಸದಾಶಯವನ್ನು ಇಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಅವರು ಜನ್ಮ ತಳೆದ ಈ ಪುಣ್ಯನೆಲದ ಮಣ್ಣನ್ನು ಗಾಂಧಿಭವನದಲ್ಲಿರುವ ಗಿಡ-ಮರಗಳ ಬುಡಕ್ಕೆ ಹಾಕಲಾಗುವುದು ಎಂದರು.

ಚಿಂತಕ ನೆಂಪೆ ದೇವರಾಜ್ ಮಾತನಾಡಿ, ಶಾಂತವೇರಿ ಹೆಸರನ್ನು ಹೇಳಿಕೊಂಡು ಬಹಳ ಮಂದಿ ವಿಧಾನಸಭೆಯ ಮೂರನೇ ಮಹಡಿಯಲ್ಲಿ ಅಧಿಕಾರ ಅನುಭವಿಸಿದ್ದರೂ ಗೋಪಾಲಗೌಡರ ಕುರಿತಾಗಿ ಕನಿಷ್ಠ ಕಾಳಜಿ ವಹಿಸಿಲ್ಲ. ಅವರ ಹೆಸರಿನಲ್ಲಿ ಶಾಂತವೇರಿ ಗ್ರಾಮದಲ್ಲಿ ಸರ್ಕಾರ ಕಾದಿರಿಸಿರುವ ನಿವೇಶನವನ್ನೂ ಕಬಳಿಸುವ ಹವಣಿಕೆ ನಡೆಸಿರುವವರ ಬಗ್ಗೆ ಇಲ್ಲಿನ ಜನತೆ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.

ಪಟ್ಟಣದಲ್ಲಿ ತಾಲೂಕು ಕಚೇರಿ ಎದುರು ಸಭೆ ನಡೆಸಿ ತೀರ್ಥಹಳ್ಳಿಯ ಜನತೆ ಜಾಥಾಕ್ಕೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net