

ಬೇಲೂರು: ಕಾಡಾನೆ ಸಮಸ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಶಾಶ್ವತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಶಾಸಕರಾದ ಬೇಲೂರಿನ ಕೆ.ಎಸ್.ಲಿಂಗೇಶ್, ಸಕಲೇಶಪುರದ ಎಚ್.ಕೆ.ಕುಮಾರಸ್ವಾಮಿ, ಅರಕಲಗೂಡಿನ ಎ.ಟಿ.ರಾಮಸ್ವಾಮಿ ಹಾಗೂ ಕಾಫಿ ಬೆಳೆಗಾರರ ಬೇಲೂರು ತಾಲೂಕು ಘಟಕದ ಅಧ್ಯಕ್ಷ ಅದ್ದೂರಿ ಕುಮಾರ್ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ ಕಾಫಿ ಬೆಳೆಗಾರರ ಜತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಶಾಸಕ ಕೆ.ಎಸ್.ಲಿಂಗೇಶ್‌ಎಚ್ಚರಿಸಿದರು.
ಗಿಡ ನೆಡುವ ನೆಪದಲ್ಲಿ ಅರಣ್ಯ ಇಲಾಖೆ ಕೋಟ್ಯಂತರ ರೂ. ಕೊಳ್ಳೆ ಹೊಡೆದಿದೆ. ಶಿವಮೊಗ್ಗದಲ್ಲಿ ಅಡಕೆ ಬೆಳೆಗೆ ತಗುಲಿದ ಎಲೆಚುಕ್ಕಿರೋಗಕ್ಕೆ ಕೇಂದ್ರ ಸರ್ಕಾರದಲ್ಲಿ ಪರಿಹಾರ ಕೇಳಲು ನಿಯೋಗ ಹೋಗಿ, ಸಮೀಕ್ಷೆಗೆ ತಂಡ ಕಳುಹಿಸಲು ಒಪ್ಪಿದ್ದಾರೆ. ಆದರೆ ಹಾಸನದಲ್ಲಿ ಕಾಫಿ ಬೆಳೆಗಾರರ ಸಂಕಷ್ಟ ಕೇಳುವವರಿಲ್ಲ, ಉಸ್ತುವಾರಿ ಹಾಗೂ ಅರಣ್ಯ ಸಚಿವರು ಇತ್ತ ಗಮನಹರಿಸುತ್ತಿಲ್ಲ, ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ, ಕಾಫಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಎಂದು ಆಗ್ರಹಿಸಿದರು.
ಸಂಸತ್‌ನಲ್ಲಿ ಕರ್ನಾಟಕದ ಪರವಾಗಿ ಎಚ್.ಡಿ.ದೇವೇಗೌಡರೇ ಮಾತನಾಡಬೇಕಾಗಿದೆ. ಕರ್ನಾಟಕದ 25 ಬಿಜೆಪಿ ಸಂಸದರು ಕೈ ಕಟ್ಟಿ ನಿಲ್ಲುತ್ತಾರೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ವಿಫಲರಾಗಿದ್ದಾರೆ. ಕಾಡಾನೆಗಳನ್ನು ಕಾಡಿಗೆ ಕಳುಹಿಸಿ ನಂತರ ಬ್ಯಾರಿಕೇಡ್ ಹಾಕಿ ಬೆಳೆಗಾರರ ಹಾಗೂ ಕಾರ್ಮಿಕರ ಜೀವವನ್ನು ಕಾಪಾಡಿ. ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಾಗ ಸಾಂತ್ವನ ಹೇಳಿ ಕಳುಹಿಸುತ್ತೀರಿ. ಹಾಸನಕ್ಕೆ ಬಂದು ಜನಪ್ರತಿನಿಧಿಗಳು ಮತ್ತು ಬೆಳೆಗಾರರ ಜತೆ ಸಭೆ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದೀರಾ, ಆದರೆ ಸಭೆ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.