ಬೆಂಗಳೂರಿಗೆ ಶರಾವತಿ ಕೊಡುವ ಪ್ರಶ್ನೆ ಇಲ್ಲ

k s eshwar (1)
Published on

ಶಿವಮೊಗ್ಗ: ಯಾವುದೇ ಕಾರಣಕ್ಕೂ ಶರಾವತಿ ನೀರನ್ನು ಬೆಂಗಳೂರಿಗೆ ನೀರು ಕೊಂಡೊಯ್ಯುವ ಪ್ರಶ್ನೆಯೇ ಇಲ್ಲ. ಅದೊಂದು ಹುಚ್ಚುತನದ ಯೋಜನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಬೆಂಗಳೂರಿಗೆ ಶರಾವತಿ ನದಿಯಿಂದ ನೀರು ಸರಬರಾಜು ಮಾಡುವ ಯೋಜನೆ ಕುರಿತು ಈ ಹಿಂದೆ ಯಾರು ಪ್ರಸ್ತಾವನೆ ಸಲ್ಲಿಸಿದ್ದರೋ ಗೊತ್ತಿಲ್ಲ. ಆದರೆ ಇಲ್ಲಿಂದ ರಾಜಧಾನಿಗೆ ಹನಿ ನೀರು ಕೊಂಡೊಯ್ಯುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಶರಾವತಿ ಭೂಗರ್ಭ ವಿದ್ಯುತ್ ಯೋಜನೆ ಸಮಂಜಸವಲ್ಲ. ಅಂತಹ ಯಾವುದೇ ಯೋಜನೆಗಳಿಗೂ ಸರ್ಕಾರ ಬೆಂಬಲ ಕೊಡುವುದಿಲ್ಲ. ಯಾರೋ ಏನೋ ಹೇಳುತ್ತಾರೆ ಎಂಬ ಕಾರಣಕ್ಕೆ ಅವುಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಕುರಿತು ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲಾಗುವುದು ಎಂದರು.

ತಲಕಾವೇರಿ ಮಾದರಿ ಅಂಬುತೀರ್ಥ ಅಭಿವೃದ್ಧಿ: ತೀರ್ಥಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧ ಶರಾವತಿ ಉಗಮ ಸ್ಥಾನವಾದ ಅಂಬುತೀರ್ಥವನ್ನು ತಲಕಾವೇರಿ ಭಾಗಮಂಡಲ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶುಕ್ರವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುದಾನ ಬಿಡುಗಡೆಗೆ ತೀರ್ವನಿಸಲಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ, ಮುಜರಾಯಿ ಇಲಾಖೆ, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಮತ್ತು ತುಂಗಾ ಮೇಲ್ದಂಡೆ ಯೋಜನೆ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಅಂಬುತೀರ್ಥದ ಆದಿದೈವ ಶ್ರೀ ರಾಮೇಶ್ವರ ಅಭಿವೃದ್ಧಿಪಡಿಸಲಾಗುವುದು ಎಂದರು.

ಅಂಬುತೀರ್ಥ ಕೆರೆ ಪಕ್ಕದಲ್ಲಿ ಪಿಚ್ಚಿಂಗ್ ವಾಲ್ ಮತ್ತು ವಾಕಿಂಗ್ ಪಾಥ್, ಪುಷ್ಕರಣಿ ಅಭಿವೃದ್ಧಿ, ನದಿ ಹಿಂಭಾಗದಲ್ಲಿ ತಡೆಗೋಡೆ, ಸಮುದಾಯ ಭವನ ನಿರ್ವಣ, ನೊಣಬೂರು-ಅಂಬುತೀರ್ಥ-ಆರಗ ರಸ್ತೆ ನಿರ್ಮಾಣ ಸೇರಿ 10 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಒಂದು ವರ್ಷದೊಳಗೆ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ ಎಂದರು.

ಬೃಹದ್ಯೋಜನೆಗೆ ಶಂಕುಸ್ಥಾಪನೆ ನಾಳೆ: ಅಂಬುತೀರ್ಥ ನಿಸರ್ಗಸಿರಿ ಅಭಿವೃದ್ಧಿ ಪಡಿಸುವ ಬೃಹದ್ಯೋಜನೆ ಕಾಮಗಾರಿಗಳ ಶಂಕುಸ್ಥಾಪನೆ ಜೂ.28ರಂದು ಬೆಳಗ್ಗೆ 10ಕ್ಕೆ ಅಂಬುತೀರ್ಥ ಕ್ಷೇತ್ರದ ಆವರದಲ್ಲಿ ನಡೆಯಲಿದೆ. ಸಚಿವ ಕೆ.ಎಸ್.ಈಶ್ವರಪ್ಪ ಶಂಕುಸ್ಥಾಪನೆ ನೆರವೇರಿಸುವರು. ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಿಶೇಷ ಆಹ್ವಾನಿತರಾಗಿದ್ದು, ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net