ಬೆಂಗಳೂರಲ್ಲಿ ಹಿರಿಯ ಅಧಿಕಾರಿಗಳ ಸಭೆ ಇಂದು

10Sgn04
Published on

ಶಿಗ್ಗಾಂವಿ: ಬೆಂಗಳೂರಲ್ಲಿ ಸೋಮವಾರ ಹಿರಿಯ ಅಧಿಕಾರಿಗಳ ಸಭೆ ಕರೆದು ಲಾಕ್​ಡೌನ್-3 ಯಾವ ರೀತಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎನ್ನುವ ಕುರಿತು ಸಮಾಲೋಚನೆ ಮಾಡಿ ಅಗತ್ಯ ಸೂಚನೆ ನೀಡಲಾಗುವುದು ಎಂದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅಜ್ಮೀರ್ ಪ್ರವಾಸಕ್ಕೆ ಹೋದ ಸುಮಾರು 38 ಜನರು ಬೆಳಗಾವಿ ಪಟ್ಟಣಕ್ಕೆ ಆಗಮಿಸಿದ್ದರು. ಅವರನ್ನು ಗುರುತಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ 30 ಜನರಿಗೆ ಪಾಸಿಟಿವ್ ಬಂದಿದೆ. ಅದೇ ರೀತಿ ಕಲಬುರಗಿ ಮತ್ತು ವಿಜಯಪುರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ ಗಡಿಗಳಲ್ಲಿ ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸುವ ಸವಾಲಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮಾರಕ ಕರೊನಾ ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಸಮರ ಸಾರಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಕರೊನಾ ವಿರುದ್ಧ ಸುದೀರ್ಘ ಹೋರಾಟ ನಡೆಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಪಕ್ಕದ ಮಹಾರಾಷ್ಟ್ರದಲ್ಲಿ 20 ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅದೇ ರೀತಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಸೋಂಕಿತರಿದ್ದಾರೆ. ಅಲ್ಲದೆ, ಮೃತಪಟ್ಟವರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.

ಕೇರಳದ ನಂತರ ಸೋಂಕು ನಿಯಂತ್ರಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಹಲವಾರು ಕ್ರಮಗಳನ್ನು ಕೈಗೊಂಡು ಲಾಕ್​ಡೌನ್​ಗೂ ಒಂದು ವಾರ ಮುಂಚೆ ಎಲ್ಲ ಸಾರ್ವಜನಿಕ ಮಾಲ್, ಚಿತ್ರಮಂದಿರ, ಮಾರುಕಟ್ಟೆಗಳನ್ನು ಬಂದ್ ಮಾಡಿದ್ದರು. ಕೋವಿಡ್ ವಾರ್ಡ್​ಗಳನ್ನು ನಿರ್ವಿುಸಿ ಲಾಕ್​ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಆರಂಭದಲ್ಲಿ ಕೋವಿಡ್-19ನ ಎರಡು ಟೆಸ್ಟ್ ಲ್ಯಾಬ್​ಗಳಿದ್ದವು. ಸದ್ಯ 32 ಟೆಸ್ಟ್ ಲ್ಯಾಬ್​ಗಳಿದ್ದು, ಪ್ರತಿದಿನ 8ರಿಂದ 9 ಸಾವಿರ ಟೆಸ್ಟ್​ಗಳನ್ನು ಮಾಡಲಾಗುತ್ತಿದೆ. ಲಾಕ್​ಡೌನ್ ಒಂದು ಮತ್ತು ಎರಡರ ಕಟ್ಟುನಿಟ್ಟಿನ ಪರಿಣಾಮವಾಗಿ ವೈರಸ್ ನಿಯಂತ್ರಣದಲ್ಲಿತ್ತು. ಆದರೆ, ಮೇ 4ರಿಂದ ಆರಂಭಗೊಂಡಿರುವ ಮೂರನೇ ಲಾಕ್​ಡೌನ್ ಜನರ ಶಿಸ್ತಿನ ಮೇಲೆ ಅವಲಂಬಿತವಾಗಿದೆ. ಮೂರನೇ ಲಾಕ್​ಡೌನ್ ನಮಗೆ ಹಲವಾರು ಸವಾಲುಗಳನ್ನು ಒಡ್ಡಿದೆ. ಮೊದಲನೆಯದಾಗಿ ಪರಸ್ಪರ ಅಂತರ ಮತ್ತು ಮಾಸ್ಕ್ ಧರಿಸುವ ಕಾರ್ಯ ಸಾರ್ವಜನಿಕರ ಸಹಕಾರದಿಂದ ಮಾತ್ರ ಸಾಧ್ಯ. ಎರಡನೆಯದಾಗಿ ಬೇರೆ ದೇಶ ಮತ್ತು ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net