ಬೆಂಗಳೂರಲ್ಲಿ ಬರಿಹೊಟ್ಟೆ ಹೋರಾಟ 14, 15ಕ್ಕೆ

press meet--08
Published on


ಚಿತ್ರದುರ್ಗ: ಬದುಕಿನ ಸ್ವಾತಂತ್ರೃಕ್ಕಾಗಿ ಭೂಮಿ, ವಸತಿ, ನಿವೇಶನ ವಂಚಿತ ಬಡವರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಎದುರು ಆ. 14, 15ರಂದು ಬರಿಹೊಟ್ಟೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕ ಕುಮಾರ್ ಸಮತಳ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಶಕಗಳಿಂದ ತುಂಡು ಭೂಮಿಯ ಮೇಲಿನ ಹಕ್ಕಿಗಾಗಿ, ತಲೆಯ ಮೇಲೊಂದು ಸೂರಿನ ಕನಸಿಗಾಗಿ ಸರ್ಕಾರದ ಹಿಂದೆ ಅಲೆದಲೆದು ಹೈರಾಣಾಗಿರುವ ಲಕ್ಷಾಂತರ ಬಡಜನರಿಗೆ ಸಿಎಂ ಸಿದ್ದರಾಮಯ್ಯ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
40-50 ವರ್ಷದಿಂದ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿದವರಿಗೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮಿತಿಯ ಕಾನೂನಿನಡಿ ಭೂ-ರಹಿತರನ್ನು ಒಳಪಡಿಸದೆ ಒಮ್ಮೆಗೆ ಪರಿಹಾರಾತ್ಮಕ ತೀರ್ಮಾನ ಕೈಗೊಳ್ಳಬೇಕು. 5 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ, ಅರಣ್ಯ ಭೂಮಿ ವ್ಯಾಪ್ತಿಯಲ್ಲಿನ ಅರ್ಜಿದಾರರನ್ನು ಒತ್ತುವರಿ ಹೆಸರಲ್ಲಿ ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.
ಸಿಎಂ ನೇತೃತ್ವದಲ್ಲಿ ಕಂದಾಯ, ಅರಣ್ಯ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ, ಹೋರಾಟದ ಪ್ರತಿನಿಧಿಗಳ ಉನ್ನತಮಟ್ಟದ ಸಭೆ ಕರೆಯಬೇಕು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಂಜೂರಾತಿ ಪ್ರಕ್ರಿಯೆ ತ್ವರಿತವಾಗಿ ಕಾಲಮಿತಿಯೊಳಗೆ ಜಾರಿಗೊಳಿಸಲು ಹೈ ಪವರ್ ಕಮಿಟಿ ರಚಿಸಬೇಕು. ಈವರೆಗೂ ರೈತರ ಮೇಲೆ ದಾಖಲಾದ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಭೂಮಿ, ವಸತಿ ನಮ್ಮ ಹಕ್ಕಾಗಿದ್ದು, ಭಿಕ್ಷೆಯಲ್ಲ. ನ್ಯಾಯ ಸಿಗುವವರೆಗೂ ಅನ್ನ ಮುಟ್ಟೆವು, ಹೋರಾಟ ಬಿಡೆವು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಸತ್ಯಪ್ಪ ಮಲ್ಲಾಪುರ, ಬೋರಣ್ಣ, ಕಾಟೀಹಳ್ಳಿ ಹನುಮಂತಪ್ಪ, ಸುನಂದಮ್ಮ, ಪ್ರಜಾಶಕ್ತಿ ಬೋರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net