ಬೆಂಗಳೂರಲ್ಲಿ ನಿವೃತ್ತ ನೌಕರ ಧರಣಿ 28ರಿಂದ

VA Strike
Published on

ಕಲಬುರಗಿ: ನಿವೃತ್ತ ಅಧಿಕಾರಿ, ನೌಕರರಿಗೆ ೭ನೇ ವೇತನ ಆಯೋಗದಡಿ ವೇತನ ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆ ಸೌಲಭ್ಯಕ್ಕೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರÈ ಉದ್ಯಾನದಲ್ಲಿ ಫೆ.೨೮ರಿಂದ ಅನಿರ್ದಿಷ್ಠಾವಧಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕ ಗುರಣ್ಣ ಅವಂಟೆ ಹೇಳಿದರು.

ಸಮಸ್ಯೆ ಬಗೆಹರಿಸಲು ೨೮ರವರೆಗೆ ಗಡುವು ನೀಡಲಾಗಿದೆ. ನಂತರ ಅನಿರ್ದಿಷ್ಟಾವಧಿವರೆಗೆ ಧರಣಿ ನಡೆಸಲಾಗುವುದು. ಹೋರಾಟಕ್ಕೆ ಅಣ್ಣಾ ಹಜಾರೆ, ವಿಶ್ರಾಂತ ಲೋಕಾಯುಕ್ತ ಸಂತೋಷ ಹೆಗ್ಗಡೆ ಬೆಂಬಲ ನೀಡುತ್ತಿದ್ದು, ಜಿಲ್ಲೆಯಿಂದ ೩೦೦ ಸಾರಿ ರಾಜ್ಯದ ೬ ಸಾವಿರಕ್ಕೂ ಅಧಿಕಾರಿ ನೌಕರರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರ ವೇತನ ಭತ್ಯೆ, ಪಿಂಚಣಿ ಪರಿಷ್ಕರಿಸಲು ೭ನೇ ವೇತನ ಆಯೋಗ ರಚಿಸಿದ್ದು, ೨೦೨೪ ಆ.೨೩ರಂದು ಪರಿಷ್ಕರಿಸಿ ಆದೇಶಿಸಿದೆ. ಆದರೆ ೨೦೨೪ ಆ.೧ರಿಂದ ಜಾರಿ ಮಾಡಿದ್ದರಿಂದ ೨೫ ತಿಂಗಳು ಸೇವೆ ಸಲ್ಲಿಸಿ, ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುಷ್ಠಾನದ ಫಲ ದೊರೆಯದೇ ಆರ್ಥಿಕ ನಷ್ಟವಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಚಳಿಗಾಲದ ಅಧಿವೇಶನದ ಬಳಿಕ ಸಭೆ ಕರೆದು ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದ್ದರೂ ಈಡೇರಿಲ್ಲ. ಸಿಎಂ ಗಮನ ಸೆಳೆಯಲು ಹೋರಾಟ ನಡೆಸಲಾಗುತ್ತಿದೆ ಎಂದರು. ಭರತರಾಜ ಸಾವಳಗಿ, ಮಲಕಪ್ಪ ಅಂಕಲಗಿ, ನಾಗಪ್ಪ ನೆಲೋಗಿ, ಡಿ.ಡಿ.ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net