

ಹುಬ್ಬಳ್ಳಿ: ಅವಳಿ ನಗರದ ಹೋಟೆಲ್ ಹಾಗೂ ವಿವಿಧ ತಿಂಡಿ-ತಿನಿಸು ತಯಾರಿಕೆ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ 69 ವಲಸೆ ಕಾರ್ವಿುಕರಿಗೆ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಶನಿವಾರದಂದು ಬೆಂಗಳೂರಿಗೆ ಕಳುಹಿಸಲಾಯಿತು.
ವಲಸೆ ಕಾರ್ವಿುಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಲು ರಾಜ್ಯ ಸರ್ಕಾರ ಉಚಿತ ವ್ಯವಸ್ಥೆ ಕಲ್ಪಿಸಿದೆ. ಅವಳಿ ನಗರದಲ್ಲಿದ್ದ ವಲಸೆ ಕಾರ್ವಿುಕರು ಬೆಂಗಳೂರಿನಿಂದ ವಿಶೇಷ ಶ್ರಮಿಕ್ ಎಕ್ಸ್ಪ್ರೆಸ್ ರೈಲಿನ ಮೂಲಕ ಜಾರ್ಖಂಡಕ್ಕೆ ತೆರಳಲಿದ್ದಾರೆ. ನಗರದ ಹೊಸ ಬಸ್ ನಿಲ್ದಾಣದಲ್ಲಿ ಬೆಳಗಿನ ಉಪಾಹಾರ ನೀಡಿ, ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು. ಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಪ್ರತಿ ಬಸ್ನಲ್ಲಿ 23ರಿಂದ 24 ಜನರಂತೆ ಒಟ್ಟು 3 ಸಾರಿಗೆ ಬಸ್ಗಳಲ್ಲಿ ಕಾರ್ವಿುಕರನ್ನು ಪರಸ್ಪರ ಅಂತರದೊಂದಿಗೆ ಕೂರಿಸಿ ಕಳುಹಿಸಲಾಯಿತು. ಪ್ರತಿ ಬಸ್ನಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿದ್ದು, ಬೆಂಗಳೂರಿನಿಂದ ಜಾರ್ಖಂಡ್ಕ್ಕೆ ಕಳುಹಿಸುವ ಕರ್ತವ್ಯವನ್ನು ನೋಡಲ್ ಅಧಿಕಾರಿ ನಿರ್ವಹಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ ತಿಳಿಸಿದ್ದಾರೆ. ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಕಾರ್ವಿುಕ ನಿರೀಕ್ಷಕರಾದ ಅಕ್ರಂ, ಅಶೋಕ ಒಡೆಯರ, ಸಾರಿಗೆ ಇಲಾಖೆಯ ಐ.ಜಿ. ಮಗಾಮಿ, ಇತರರಿದ್ದರು.
ಸಾರಿಗೆ ಬಸ್ ಏರದ ಜನ: ಲಾಕ್ಡೌನ್ ಸಡಿಲಿಕೆ ಆಗಿದ್ದರೂ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆ ಇದ್ದದ್ದು ನಗರದ ಹಳೇ ಬಸ್ ನಿಲ್ದಾಣ ಹಾಗೂ ಸಿಬಿಟಿಯಲ್ಲಿ ಕಂಡುಬಂದಿತು. ಹಳೇ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ನಿಲ್ಲಿಸಿದ್ದರೂ ಪ್ರಯಾಣಿಕರೇ ಇರಲಿಲ್ಲ. ಹೀಗಾಗಿ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರನ್ನು ಕಾಯುತ್ತ ಕೂರುವಂತಹ ಪರಿಸ್ಥಿತಿ ಇತ್ತು. ಸಾರಿಗೆ ಬಸ್ ಬಳಸದ ನಾಗರಿಕರು ಬೈಕ್, ಕಾರ್ಗಳಲ್ಲಿ ಮಾರುಕಟ್ಟೆಗೆ ತೆರಳುತ್ತಿದ್ದರು. ಹೀಗಾಗಿ ವಾಹನ ದಟ್ಟಣೆ ಹೆಚ್ಚಾಗಿತ್ತು. ದುರ್ಗದಬೈಲ್ನಲ್ಲಿ ಮಧ್ಯಾಹ್ನದಿಂದಲೇ ವ್ಯಾಪಾರ ಚುರುಕು ಪಡೆದಿತ್ತು. ಜನತಾ ಬಜಾರ್, ಎಂ.ಜಿ. ಮಾರ್ಕೆಟ್ನಲ್ಲಿಯೂ ಜನದಟ್ಟಣೆ ಸಾಮಾನ್ಯವಾಗಿತ್ತು. ಮಾರುಕಟ್ಟೆಯಲ್ಲಿದ್ದ ಜನರು ಪರಸ್ಪರ ಅಂತರ ಕಾಪಾಡಿಕೊಂಡಿದ್ದು ವಿರಳವಾಗಿತ್ತು. ಮಾಸ್ಕ್ ಇದ್ದರೂ ಕೊರಳಿಗೆ ಜೋತು ಬಿಡುತ್ತಿದ್ದರೆ ಹೊರತು, ಸರಿಯಾದ ರೀತಿಯಲ್ಲಿ ಧರಿಸಿದವರ ಸಂಖ್ಯೆಯೂ ಕಡಿಮೆ ಇತ್ತು.
ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ: ಕಿಮ್್ಸ, ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಶನಿವಾರವೂ ಗರ್ಭಿಣಿಯರ ಪರೀಕ್ಷೆ ನಡೆಸಲಾಯಿತು. ಕರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಯಿತು. ಶನಿವಾರ ಒಟ್ಟು 52 ಜನರ ಕೋವಿಡ್ ಪರೀಕ್ಷೆ ನಡೆಸಲಾಯಿತು.
ಸೀಲ್ಡೌನ್ ಪ್ರದೇಶದಲ್ಲಿ ಸಂಚಾರ: ಇಲ್ಲಿನ ಶಾಂತಿನಗರ, ನವ ಅಯೋಧ್ಯಾ ನಗರವನ್ನು ಸೀಲ್ಡೌನ್ ಪ್ರದೇಶವೆಂದು ಘೊಷಿಸಲಾಗಿದೆ. ಆದರೂ ಹೆದರಿಕೆ ಇಲ್ಲದೆ ಜನರು ಓಡಾಡುತ್ತಿದ್ದಾರೆ. ಜನರು ಸುಖಾಸುಮ್ಮನೆ ಹೊರಗಡೆ ಬರುತ್ತಿದ್ದಾರೆ. ಗಾಡಿ ಅಂಗಡಿಗಳ ಬಳಿ ಜಮಾಯಿಸಿ ತಮಗೆ ಬೇಕಿದ್ದ ಪದಾರ್ಥಗಳನ್ನು ಖರೀದಿಸಿಕೊಂಡು ಹೊರಟಿದ್ದಾರೆ. ಇತರ ಅಂಗಡಿಗಳು ತೆರೆದಿದ್ದು, ಪರಸ್ಪರ ಅಂತರ ಮರೆತು ನಿಲ್ಲುತ್ತಿದ್ದಾರೆ. ಹಿಂದೆ ಹಾಕಿದ್ದ ಬ್ಯಾರಿಕೇಡ್ ತೆಗೆದಿದ್ದು, ಸೀಲ್ಡೌನ್ ಅಘೊಷಣೆ ಮುಗಿದಿರಬಹುದು ಎಂದು ಭಾವಿಸಿದಂತಿದೆ.
ಮಹರ್ಷಿ ಯಾಜ್ಞವಲ್ಕ ್ಯ ಜಯಂತಿ ರದ್ದು: ಧಾರವಾಡ ನಗರದ ಮದಿಹಾಳದ ಚಿದಂಬರ ಸೇವಾ ಸಮಿತಿಯಲ್ಲಿ ಜೂ. 1ರಂದು ನಡೆಯಬೇಕಿದ್ದ ಮಹರ್ಷಿ ಯಾಜ್ಞವಲ್ಕ್ಯ ಜಯಂತಿಯನ್ನು ಕರೊನಾ ನಿಮಿತ್ತ ಈ ವರ್ಷ ರದ್ದುಗೊಳಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂದು ಭಕ್ತರು ತಮ್ಮ ಮನೆಯಲ್ಲೇ ಯಾಜ್ಞವಲ್ಕ್ಯರ ಪೂಜೆ, ಉಪಾಸನೆ ಮಾಡಬೇಕು ಎಂದು ಯಾಜ್ಞವಲ್ಕ್ಯ ಸೇವಾ ಸಂಘದ ಪ್ರಕಟಣೆ ತಿಳಿಸಿದೆ.