ಬೆಂಕಿಯಲ್ಲಿ ಬೆಂದ ಎಲ್ಲೋಡು ಬೆಟ್ಟ ; ಅಪರೂಪದ ಮರಗಿಡಗಳು ಆಹುತಿ, ಕಿಡಿ ಆರಿಸಲು ಹರಸಾಹಸ

Gudi
Published on

ಗುಡಿಬಂಡೆ : ಕೆಲ ತಿಂಗಳ ಹಿಂದೆಯಷ್ಟೇ ಸೂಕ್ಷ್ಮಜೈವಿಕ ತಾಣವಾಗಿ ಘೋಷಿಸಲ್ಪಟ್ಟಿದ್ದ ಹಾಗೂ ಪವಿತ್ರ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಎಲ್ಲೋಡು ಆದಿನಾರಾಯಣ ಸ್ವಾಮಿ ಬೆಟ್ಟ ಸೋಮವಾರ ರಾತ್ರಿ ಹೊತ್ತಿ ಉರಿದಿದೆ.

ರಾತ್ರಿ 9.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಜೀವ ಸಂಕುಲ, ಅಪರೂಪದ ಮರಗಿಡಗಳು ಬೆಂಕಿಗಾಹುತಿಯಾಗಿವೆ.ಬೇಸಿಗೆ ಆರಂಭವಾಗುತ್ತಿದ್ದಂತೆ ಬಯಲುಸೀಮೆ ಜಿಲ್ಲೆಯಲ್ಲಿ ಅಗ್ನಿ ಅವಘಡ, ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚಿಗೆ ಚಿಂತಾಮಣಿ ನಗರಕ್ಕೆ ಹೊಂದಿಕೊಂಡಿರುವ ಕಾಡುಮಲ್ಲೇಶ್ವರ ಬೆಟ್ಟಕ್ಕೆ ಬೆಂಕಿಬಿದ್ದ ಪ್ರಕರಣ ಮಾಸುವ ಮುನ್ನವೇ ಈಗ ಗುಂಡಿಬಂಡೆ ತಾಲೂಕಿನ ಎಲ್ಲೋಡು ಬೆಟ್ಟಕ್ಕೆ ಬೆಂಕಿ ಬಿದ್ದಿರುವುದು ಸಸ್ಯಸಂಪತ್ತು, ಜೀವ ಸಂಕುಲ ಬೆಂಕಿಯಲ್ಲಿ ಬೆಂದಿದೆ.

ಆದಿನಾರಾಯಣ ಬೆಟ್ಟಕ್ಕೆ ಬೆಂಕಿ ಬಿದ್ದಿರುವುದು ತಿಳಿಯುತ್ತಿದ್ದಂತೆ ಎಲ್ಲೋಡು ಸೇರಿ ಅಕ್ಕಪಕ್ಕದ ಗ್ರಾಮಗಳ ಜನರು ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ನೆರವಾದರಾದರೂ ತಹಬದಿಗೆ ಬಂದಿಲ್ಲ ಎನ್ನಲಾಗಿದೆ.

ರಾತ್ರಿ ಹೊತ್ತಿನಲ್ಲಿ ಬೆಟ್ಟದ ಸುತ್ತಮುತ್ತ ಮದ್ಯಪಾನ, ಧೂಮಪಾನ ಮಾಡುವುದು ಸಾಮಾನ್ಯವಾಗಿದ್ದು, ಕುಡುಕರು ಬೀಡಿ ಅಥವಾ ಸಿಗರೇಟ್ ಸೇದಿ ಬಿಸಾಡಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.

ದುರಂತ ಇದೇ ಮೊದಲು: ಬೆಟ್ಟದಲ್ಲಿ ಬೆಂಕಿ ಅವಘಡ ಇದೇ ಮೊದಲು ಎನ್ನಲಾಗಿದೆ. ಬೆಟ್ಟವನ್ನು ಇಲ್ಲಿನ ಜನರು ಪೂಜನೀಯವಾಗಿ ಕಾಣುತ್ತಾರಲ್ಲದೆ ಗಿಡ-ಮರಗಳನ್ನು ಕಡಿಯುವುದಿಲ್ಲ, ಒಂದೊಮ್ಮೆ ಮರಗಳನ್ನು ಕಡಿದರೆ ಮನೆಗೆ ಕೇಡಾಗುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ, ಹೀಗಾಗಿ ಸುತ್ತಮುತ್ತಲ ಬೆಟ್ಟಗಳಲ್ಲಿ ಹಸಿರು ನಾಶವಾಗಿದ್ದರೂ ಈ ಬೆಟ್ಟದಲ್ಲಿ ಮಾತ್ರ ಮುಕ್ಕಾಗದೆ ಹಾಗೆಯೇ ಉಳಿದಿತ್ತು, ಆದರೆ ಈಗ ಎಲ್ಲವನ್ನೂ ಅಗ್ನಿ ಆಪೋಶನ ತೆಗೆದುಕೊಂಡಿದೆ.

ಅಪರೂಪದ ತಾಣ: ಜೀವ ವೈವಿಧ್ಯದ ಸ್ವರ್ಗ: ಕೆಲ ತಿಂಗಳ ಹಿಂದೆ ರಾಜ್ಯ ಜೀವ ವೈವಿಧ್ಯ ಮಂಡಳಿ ಎಲ್ಲೋಡು ಆದಿನಾರಾಯಣ ಸ್ವಾಮಿ ಬೆಟ್ಟವನ್ನು ಸೂಕ್ಷ್ಮ ಜೈವಿಕ ಪ್ರದೇಶ ಎಂದು ಘೋಷಣೆ ಮಾಡಿತ್ತು. ಅಷ್ಟೇ ಅಲ್ಲದೆ, ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇಲ್ಲಿಗೆ ಭೇಟಿ ನೀಡಿ ಅಲ್ಲಿನ ಜೀವ ವೈವಿಧ್ಯ ಕಂಡು ಮಾರು ಹೋಗಿದ್ದರು. ಆದಿನಾರಾಯಣ ಸ್ವಾಮಿ ಬೆಟ್ಟದ ಅಪರೂಪದ ವೃಕ್ಷಗಳು, ಜೀವಿಗಳು, ಪಕ್ಷಿಗಳ ನೆಲೆಯಾಗಿದ್ದು, ಪ್ರಾಕೃತಿಕವಾಗಿ ಸಮೃದ್ಧವಾಗಿತ್ತು. ಆದರೆ, ಸೂಕ್ಷ್ಮ ಜೈವಿಕ ಪ್ರದೇಶದ ಮನ್ನಣೆ ಸಿಕ್ಕ ಬಳಿಕ ಬೆಂಕಿ ದುರಂತ ಸಂಭವಿಸಿರುವುದು ಪರಿಸರ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.

ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದು :ಎಲ್ಲೋಡು ಗುಡಿಬಂಡೆ ತಾಲೂಕಿನ ಪ್ರಮುಖ ಪುಣ್ಯಕ್ಷೇತ್ರ. ಪಂಚನಾರಾಯಣ ಕ್ಷೇತ್ರಗಳಾದ ಉತ್ತರ ಭಾರತದ ಬದರಿ ಕ್ಷೇತ್ರದ ಬದರಿನಾರಾಯಣ, ಗದುಗಿನ ವೀರನಾರಾಯಣ, ಕೈವಾರದ ಅಮರನಾರಾಯಣ, ಮೇಲುಕೋಟೆ ಚೆಲುವನಾರಾಯಣ ಹಾಗೂ ಎಲ್ಲೋಡಿನ ಆದಿನಾರಾಯಣ ಕೂಡ ಒಂದು. ಲಕ್ಷ್ಮೀ ಆದಿನಾರಾಯಣಸ್ವಾಮಿ ಉಗಮ ಸ್ಥಾನ ಎನ್ನಲಾಗಿದೆ, ಎಲ್ಲೋಡು ಬೆಟ್ಟ ಸಂಪೂರ್ಣವಾಗಿ ಆಮೆ ಆಕಾರದಲ್ಲಿ ಇರುವುದರಿಂದ ಇದಕ್ಕೆ ಕೂರ್ಮಗಿರಿ ಎಂತಲೂ ಕರೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net