ಬೆಂಕಿಗೆ ಮೂರು ಜಾನುವಾರು ಬಲಿ

Capture2
Published on

ಹುಲಸೂರು: ಜಾನುವಾರು ಕೊಟ್ಟಿಗೆಗೆ ಬೆಂಕಿ ತಗುಲಿ ಹಸು, ಹೋರಿ ಮತ್ತು ಎಮ್ಮೆ ಅಸುನೀಗಿದ ಘಟನೆ ದೇವನಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಶ್ರೀಧರ ಬಿರಾದಾರ್ ಅವರ ಮಿರಕಲ್ ರಸ್ತೆಯ ಜಮೀನಿನಲ್ಲಿರುವ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು, ಇನ್ನೊಂದು ಹೋರಿ ಹಗ್ಗ ಹರಿದುಕೊಂಡು ಪ್ರಾಣ ಉಳಿಸಿಕೊಂಡಿದೆ. ಆದರೆ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಪಶು ವೈದ್ಯ ಶಿವಕುಮಾರ ಕವಟೆ ಚಿಕಿತ್ಸೆ ನೀಡುತ್ತಿದ್ದಾರೆ. ಕೊಟ್ಟಿಗೆಯಲ್ಲಿದ್ದ 70 ಸ್ಪಿಂಕ್ಲರ್ ಪೈಪ್, ಕೃಷಿ ಸಲಕರಣೆಗಳು ಸಹ ಸುಟ್ಟಿದ್ದು, ರೈತ ಕಂಗಾಲಾಗಿದ್ದಾನೆ. ಪಿಎಸ್ಐ ನಿಂಗಪ್ಪ ಮಣ್ಣೂರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಹುಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ರೈತನಿಗೆ ಧೈರ್ಯ ಹೇಳಿದ ತಹಸೀಲ್ದಾರ್ ಶಿವಾನಂದ ಮೇತ್ರೆ, ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ರೈತ ಸಂಘದ ಗ್ರಾಮ ಅಧ್ಯಕ್ಷ ಧನರಾಜ ಜಮಖಂಡೆ, ಕಾಂಗ್ರೆಸ್ ಮುಖಂಡ ಸಂತೋಷ ಗುತ್ತೇದಾರ್, ದಿಲಶುಕ್ ತಾತೇರಾವ, ಸದಾನಂದ ಬಿರಾದಾರ್, ವಾಮನ್ ಮೀರಗಾಳೆ, ಪ್ರಕಾಶ ಗಾಯಕವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net