ಬೆಂಕಿಗೆ ಗೃಹೋಪಯೋಗಿ ವಸ್ತುಗಳು ಭಸ್ಮ

24NGD1
ನಂಜನಗೂಡಿನಲ್ಲಿ ಅಗ್ನಿ ಅವಘಡದಿಂದಾಗಿ ಗೃಹೋಪಯೋಗಿ ವಸ್ತುಗಳ ಮಾರಾಟದ ಅಂಗಡಿ ಸಂಪೂರ್ಣ ಭಸ್ಮವಾಗಿದೆ.
Published on

ನಂಜನಗೂಡು:

ನಗರದ ಅಶೋಕಪುರಂ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡು ಫರ್ನಿಚರ್ ಅಂಗಡಿ ಹಾಗೂ ಗೋದಾಮು ಸಂಪೂರ್ಣ ಸುಟ್ಟು ಹೋಗಿದೆ.

ನಗರದ ಎಂಜಿಎಸ್ ರಸ್ತೆಗೆ ಹೊಂದಿಕೊಂಡಂತಿದ್ದ ಸ್ಥಳೀಯ ನಿವಾಸಿ ಆದೀಕ್ ಪಾಷ ಎಂಬುವವರಿಗೆ ಸೇರಿದ ಗೃಹೋಪಯೋಗಿ ವಸ್ತುಗಳ ಅಂಗಡಿಯಲ್ಲಿ ಮಧ್ಯರಾತ್ರಿ 2 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡು ಸೋಫಾ ಸೆಟ್‌ಗಳು, ಡೈನಿಂಗ್ ಟೇಬಲ್, ಬೀರು, ಮಂಚ, ದಿವಾನ್ ಸೆಟ್, ಕಂಪ್ಯೂಟರ್ ಟೇಬಲ್‌ಗಳು ಸೇರಿದಂತೆ ಇತರ ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ.

ಗೋದಾಮಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಬೆಂಕಿಗಾಹುತಿಯಾಗಿ ಸ್ಫೋಟಗೊಂಡಿದೆ. ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತಲಿನ ಪ್ರದೇಶಕ್ಕೂ ಹರಡುವ ಭೀತಿಯುಂಟಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ 3 ವಾಹನಗಳು ಬೆಳಗಿನ ಜಾವ 5ರವರೆಗೂ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅನಾಹುತ ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಅಂಗಡಿ ಮಾಲೀಕ ಆದೀಕ್ ಪಾಷ ಅಗ್ನಿ ಅವಗಢದಿಂದಾಗಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ನಾಶವಾಗಿವೆ. ಬೆಂಕಿಗಾಹುತಿಯಾದ ಕಟ್ಟಡ ಜನ ವಸತಿ ಪ್ರದೇಶದಲ್ಲಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಮುಖ್ಯರಸ್ತೆಗೆ ಹೊಂದಿಕೊಂಡಂತೆ ರಾಷ್ಟ್ರೀಕೃತ ಬ್ಯಾಂಕ್ ಇದ್ದುದ್ದರಿಂದ ಬೆಂಕಿ ನಂದಿಸುವವರೆಗೂ ಜನರು ಆತಂಕದಲ್ಲೇ ಕಾಲ ದೂಡುವಂತಾಗಿತ್ತು. ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net