

ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಎಲ್ಲೇಮಾಳ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಹೊತ್ತಿ ಉರಿದು ಬೆಂಕಿಗಾಹುತಿಯಾಗಿದೆ.
ಬೆಂಗಳೂರಿನ ಶ್ರೀಧರ್ ಎಂಬುವರು ಸ್ನೇಹಿತನೊಂದಿಗೆ ಕಾರಿನಲ್ಲಿ ಮ.ಬೆಟ್ಟಕ್ಕೆ ತೆರಳಿ ಮುಂಜಾನೆ 5.30ರ ವೇಳೆಯಲ್ಲಿ ವಾಪಸಾಗುತ್ತಿದ್ದರು. ಈ ವೇಳೆ ಎಲ್ಲೇಮಾಳದ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡು ಕಾರಿನಿಂದ ಕೆಳಗಿಳಿದ ಶ್ರೀಧರ್ ಪರಿಶೀಲಿಸಲು ಬಾನೆಟ್ ತೆರೆದಾಗ ಬೆಂಕಿ ಜ್ವಾಲೆ ಹೆಚ್ಚಾಗಿದೆ. ಸದ್ಯ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ರವಿ, ಆನಂದ್, ಜಯಪ್ರಕಾಶ್, ಅಶೋಕ್ ಹಾಗೂ ಬಸವರಾಜು ಬೆಂಕಿಯನ್ನು ನಂದಿಸಿದರು.