ಬೆಂಕಿ ರೋಗಕ್ಕೆ 4 ಎಕರೆ ಭತ್ತದ ಫಸಲು ನಾಶ

13M.D.R.2
ಮದ್ದೂರು ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಬೆಂಕಿ ರೋಗಕ್ಕೆ ಸುಮಾರು 4 ಎಕರೆ ಭತ್ತದ ಫಸಲು ಸಂಪೂರ್ಣ ನಾಶವಾಗಿರುವುದು.
Published on

ಮದ್ದೂರು: ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಬೆಂಕಿ ರೋಗಕ್ಕೆ ಸುಮಾರು 4 ಎಕರೆ ಭತ್ತದ ಫಸಲು ಸಂಪೂರ್ಣ ನಾಶವಾಗಿದೆ.

ಗ್ರಾಮದ ರೈತ ಹಾಗೂ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಎಂಬುವರಿಗೆ ಸೇರಿರುವ ಭತ್ತದ ಫಸಲಾಗಿದ್ದು, ಇದುವರೆಗೆ ಸುಮಾರು 1 ಲಕ್ಷ ರೂ. ಖರ್ಚು ಮಾಡಿ 4 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆದಿದ್ದರು. ಇನ್ನು 20 ದಿನ ಕಳೆದಿದ್ದರೆ ಫಸಲು ಕೈ ಸೇರಿ ಖರ್ಚು ಕಳೆದು ಅಂದಾಜು 3 ಲಕ್ಷ ರೂ. ಲಾಭ ಬರುತ್ತಿತ್ತು. ಈ ಬೆಂಕಿ ರೋಗದಿಂದ ಹಾಕಿದ ಬಂಡವಾಳವು ಕೈ ಸೇರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದರು.

ಹಲವು ತಿಂಗಳಿಂದ ತುಂಬ ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆಯನ್ನು ಬೆಳೆದಿದ್ದೆ. ಈಗ ಬೆಳೆಗೆ ರೋಗ ಬಂದಿರುವುದನ್ನು ನೋಡಿದರೆ ಮನಸಿಗೆ ತುಂಬ ಬೇಸರವಾಗುತ್ತಿದೆ. ಕಷ್ಟ ಪಟ್ಟು ಬೆಳೆದ ಫಸಲು ಈ ರೀತಿಯಾದರೆ ಏನು ಮಾಡುವುದು ಎಂದು ಬೇಸರ ವ್ಯಕ್ತಪಡಿಸಿದರು.

ನಿರಂತರ ಮಳೆಯಿಂದಾಗಿ ಭತ್ತದ ಬೆಳೆಗೆ ಬೆಂಕಿ ರೋಗ ಬಂದಿದ್ದು, ನನ್ನಂತೆ ತಾಲೂಕಿನ ಹಲವಾರು ರೈತರು ಬೆಳೆದಿರುವ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಭತ್ತದ ಬೆಳೆಗೆ ಬೆಂಕಿ ರೋಗ ಹಾಗೂ ಕೀಟ ಬಾಧೆ ಕಾಣಿಸಿಕೊಂಡಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಸಂಬಂಧ ಅಧಿಕಾರಿಗಳಿಂದ ಸರ್ವೇ ಮಾಡಿಸಿ ವೈಜ್ಞಾನಿಕವಾಗಿ ಬೆಳೆ ಪರಿಹಾರ ಕೊಡಿಸಬೇಕು ಎಂದು ಸರ್ಕಾರಕ್ಕೆ ರೈತ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net