ಬೆಂಕಿ ಉಂಡೆ ಸೀಳಿ ಬಂದ ರಾಸುಗಳು

16
Published on

ಮೈಸೂರು: ಸಂಕ್ರಾಂತಿ ಹಬ್ಬದ ಅಂಗವಾಗಿ ಮೈಸೂರು ತಾಲೂಕಿನ ಸಿದ್ದಲಿಂಗಪುರದಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಸಾಂಪ್ರದಾಯಿಕ ಆಚರಣೆ ಭಾನುವಾರ ಸಂಜೆ ರೋಚಕವಾಗಿ ನಡೆಯಿತು.


ಧಗಧಗನೆ ಉರಿಯೋ ಬೆಂಕಿಯ ಉಂಡೆಯನ್ನೇ ಸೀಳಿ ಬಂದ ರಾಸುಗಳು, ಮೈನವಿರೇಳಿಸೋ ದೃಶ್ಯಗಳನ್ನು ಜನರು ಕಣ್ತುಂಬಿಕೊಂಡರು.


ಈ ಗ್ರಾಮದಲ್ಲಿ ಆಯ್ದುಹೋಗುವ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಕ್ರಾಂತಿ ದಿನ ಪ್ರತಿ ವರ್ಷ ರಾಸುಗಳಿಗೆ ಕಿಚ್ಚು ಹಾಯಿಸಲಾಗುತ್ತಿತ್ತು. ಆದರೆ, ಈ ಸಲ ಸ್ಥಳದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಯಿತು. ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಇದು ನಡೆಯಿತು.


ಗ್ರಾಮದಲ್ಲಿ ಹೆದ್ದಾರಿಯ ಮೇಲ್ಸೇತುವೆ ಬಂದಿದೆ. ಗ್ರಾಮ ಕೆಳಭಾಗದಲ್ಲಿ ಇದೆ. ಆದ್ದರಿಂದ ಸರ್ವೀಸ್ ರಸ್ತೆಯಲ್ಲಿ ಈ ಸಾಂಪ್ರದಾಯಿಕ ಕಾರ್ಯಕ್ರಮವನ್ನು ನಡೆಸುವ ಮೂಲಕ ಗ್ರಾಮಸ್ಥರು ಸಂಭ್ರಮಿಸಿದರು.
ಇದನ್ನು ನೋಡಲು ಇಲ್ಲಿಯ ಜನರು ಕಿಕ್ಕಿರಿದು ಸೇರಿದ್ದರು. ಸೂರ್ಯ ಅಸ್ತಂಗತವಾಗುತ್ತಿದ್ದಂತೆ ರಸ್ತೆಯ ಮೇಲೆ ಬೆಂಕಿ ಮೇಲೆದ್ದಿತು. ಸಿಂಗಾರಗೊಂಡು ಸರದಿಗಾಗಿ ಎದುರು ನೋಡುತ್ತಿದ್ದ ರಾಸುಗಳು ಕಿಚ್ಚು ಹಾಯುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಗಾರ ಮುಗಿಲುಮುಟ್ಟಿತು.


ಸಂಕ್ರಾಂತಿ ಅಂಗವಾಗಿ ಇಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವುದು ವಿಶೇಷ. ಅಂತೆಯೇ ಭಾನುವಾರ ಕೂಡ ಬೆಂಕಿಯನ್ನು ಸೀಳಿ ಓಡುವ ರಾಸುಗಳನ್ನು ನೋಡಲು ನಿರೀಕ್ಷೆಯಂತೆ ಜನರು ಜಮಾಯಿಸಿದ್ದರು. 20 ನಿಮಿಷ ನಡೆದ ಈ ಗ್ರಾಮೀಣ ಕ್ರೀಡೆಯ ಅಪರೂಪದ ಕ್ಷಣವನ್ನು ವಿವಿಧ ಊರುಗಳ ಜನರು ವೀಕ್ಷಿಸಿದರು.


ಸುಗ್ಗಿಯ ಸಂಭ್ರಮವನ್ನು ಜಾನುವಾರುಗಳೊಂದಿಗೆ ಆಚರಿಸುವ ಸಂಪ್ರದಾಯವನ್ನು ಸಿದ್ದಲಿಂಗಪುರದ ರೈತರು ಅಂದಾಜು 70 ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ಮೈತೊಳೆದು ಶುಚಿಗೊಳಿಸಿದ ರಾಸುಗಳ ಕೋಡುಗಳಿಗೆ ಬಣ್ಣಬಳಿದು ಅಂದ ಹೆಚ್ಚಿಸಿದರು. ಕೊರಳಿಗೆ, ದೇಹಕ್ಕೆ ಹೂವಿನ ಮಾಲೆಗಳಿಂದ ಅಲಂಕರಿಸಿ ಬಲೂನುಗಳನ್ನು ಕಟ್ಟಿದರು.
ಕಿಚ್ಚು ಹಾದು ಬರುವ ರಾಸುಗಳು ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು. ಇವುಗಳ ಪಾದಪೂಜೆ ಮಾಡಿ ಪ್ರಸಾದ ನೀಡಿ ಮನೆ ತುಂಬಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net