ಬೆಂಕಿ ಅವಘಡದಿಂದ 4.5 ಕೋಟಿ ರೂ. ಹಾನಿ

h27-Vibhav 1
Published on

ಹುಬ್ಬಳ್ಳಿ: ತಾಲೂಕಿನ ಶೆರೆವಾಡ ಬಳಿಯ ವಿಭವ ಕೆಮಿಕಲ್ಸ್​ನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅವಘಡದಿಂದ ಸುಮಾರು 4.5 ಕೋಟಿ ರೂ.ನಷ್ಟು ಹಾನಿ ಸಂಭವಿಸಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್. ನಂದಕುಮಾರ ತಿಳಿಸಿದರು.

ಕಂಪನಿಯ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಮಿಕಲ್ಸ್​ನ ಇಂಡಸ್ಟ್ರಿಯಲ್ ಪ್ರಾಡಕ್ಟ್ ಡಿವಿಷನ್​ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿ ಫೈನ್ ಆಯಿಲ್, ಐಸೋ ಪ್ರಾಫೈಲ್ ಆಲ್ಕೋಹಾಲ್ ಇತ್ಯಾದಿ ರಾಸಾಯನಿಕಗಳು ಇದ್ದವು. ಇವನ್ನು ಆಭರಣಗಳು, ಇಂಡಸ್ಟ್ರಿಯಲ್ ಬಾಲ್ ಬೇರಿಂಗ್ ಹಾಗೂ ಯಂತ್ರ ಕ್ಲೀನ್ ಮಾಡುವ ದ್ರಾವಣ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು. ಇವುಗಳ ಜತೆ 8 ಲಾರಿ ಲೋಡ್​ನಷ್ಟು ಕಸಬರಗಿ ತಯಾರಿಕೆ ಸಾಮಗ್ರಿಗಳು ಸುಟ್ಟು ಹೋಗಿವೆ ಎಂದು ವಿವರಿಸಿದರು. ದಸರಾ ನಿಮಿತ್ತ ರಜೆ ಇದ್ದುದರಿಂದ ಪ್ರಾಣ ಹಾನಿ ಸಂಭವಿಸಿಲ್ಲ. 2001ರಲ್ಲಿ ಕಂಪನಿ ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೂ ಒಮ್ಮೆಯೂ ಬೆಂಕಿ ಅವಘಡ ಸಂಭವಿಸಿರಲಿಲ್ಲ ಎಂದರು.

ವಿಧ್ವಂಸಕ ಕೃತ್ಯವಲ್ಲ
ವಿಭವ ಕೆಮಿಕಲ್ಸ್​ನಲ್ಲಿ ಸಂಭವಿಸಿದ ಬೆಂಕಿ ಅವಘಡ ವಿಧ್ವಂಸಕ ಕೃತ್ಯವೆಂದು ಅನಿಸುವುದಿಲ್ಲ. ಇದೊಂದು ಆಕಸ್ಮಿಕ ಘಟನೆ. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಕೇಳಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಘಟನೆಯಲ್ಲಿ ಕೋಟ್ಯಂತರ ರೂ. ಹಾನಿ ಸಂಭವಿಸಿದೆ. ಕಟ್ಟಡಕ್ಕೆ ಬಹಳಷ್ಟು ಧಕ್ಕೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದ್ದರ ಪರಿಣಾಮ ಹಾನಿ ಪ್ರಮಾಣ ತಗ್ಗಿದೆ. ಇಲ್ಲದಿದ್ದರೆ ಸಂಪೂರ್ಣ ಕಟ್ಟಡ ನೆಲಸಮಗೊಳ್ಳುತ್ತಿತ್ತು ಎಂದು ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net