ಬೆಂಕಿ ಅವಘಡಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ:ಆರ್.ಕೆ. ಗಿಡ್ಡೇಗೌಡ ಸಲಹೆ

ಬೆಂಕಿ ಅವಘಡಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ:ಆರ್.ಕೆ. ಗಿಡ್ಡೇಗೌಡ ಸಲಹೆ
Published on

ಹಾಸನ: ಅಗ್ನಿ ದುರಂತವು ನಾನಾ ರೀತಿಯಲ್ಲಿ ಸಂಭವಿಸಲಿವೆ. ಈ ವೇಳೆ ಯಾರು ಹೆದರದೆ ಜಾಗೃತರಾದರೆ ಆಗುವ ಅಪಾಯವನ್ನು ತಪ್ಪಿಸಬಹುದು. ಇಲ್ಲವಾದರೆ ಹೆಚ್ಚಿನ ಅನಾಹುತ ನಡೆಯುತ್ತದೆ ಎಂದು ಅಗ್ನಿಶಾಮಕ ದಳದ ಠಾಣಾಧಿಕಾರಿ ಆರ್.ಕೆ. ಗಿಡ್ಡೇಗೌಡ ಹೇಳಿದರು.
ನಗರದ ಮಹಾರಾಜ ಪಾರ್ಕ್‌ನಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ಆಯೋಜಿಸಿರುವ ಬೇಸಿಗೆ ವಿಶೇಷ ಶಿಬಿರದ ಚಿಣ್ಣರ ಚಿಲಿಪಿಲಿ ಕಲರವ ಮೇಳದಲ್ಲಿ 5ನೇ ದಿನವಾದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಗ್ನಿ ಸುರಕ್ಷತೆ ಕುರಿತು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಾಗ ಮೊದಲು ಕರೆಂಟ್ ಸ್ವಿಚ್ ಆಫ್ ಮಾಡಬೇಕು. ನಂತರ ಮಣ್ಣು ಹಾಕಬಹುದು. ಇನು ಹಳ್ಳಿ ಕಡೆ ದನ-ಕರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕುತ್ತಾರೆ. ಅದು ಗ್ರೌಂಡ್ ಆಗಿ ಜಾನುವಾರುಗಳು ಸಾಯುತ್ತದೆ. ಈ ವೇಳೆ ಒಣ ವಸ್ತು ಏನೇ ಇದ್ದರೂ ಅದನ್ನು ಉಪಯೋಗಿಸಿ ಕಾಪಾಡಬಹುದು. ಮನೆಯಲ್ಲಿ ಫ್ರಿಡ್ಜ್, ವಾಷಿಂಗ್ ಮಿಷೆನ್ ಯಾವುದಾದರೂ ವಸ್ತು ಸಿಡಿದು ಬೆಂಕಿ ಹತ್ತಿಕೊಂಡರೇ ತಕ್ಷಣ ಮೇನ್ ಸ್ವಿಚ್ ಆಫ್ ಮಾಡುವುದನ್ನು ಮರೆಯಬಾರದು ಎಂದರು.
ಕೆರೆ, ಕಟ್ಟೆ, ನದಿ, ಬಾವಿಯಲ್ಲಿ ಈಜುವಾಗಲು ಕೂಡ ಎಚ್ಚರದಿಂದ ಇರಬೇಕು. ಎಲ್ಲೆ ಬೆಂಕಿ ಹತ್ತಿಕೊಂಡರೂ ಮೊದಲು ವೈಜ್ಞಾನಿಕವಾಗಿ ಎಚ್ಚರದಿಂದ ಬೆಂಕಿ ಆರಿಸಿ ಆಗುವ ಹೆಚ್ಚಿನ ಅಪಾಯವನ್ನು ತಪ್ಪಿಸಬಹುದು. ಪ್ರಸ್ತುತದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಒಣಗಿದ ಭಾಗದಲ್ಲಿ ಯಾರು ಕೂಡ ಬಿಡಿ, ಸಿಗರೇಟ್ ಸೇದಿ ಎಸೆಯಬೇಡಿ. ಬೆಂಕಿ ಎಂಬುದನ್ನು ಸಲ್ಪವೂ ತಾಗಿಸಬಾರದು. ಸಲ್ಪ ಹತ್ತಿಕೊಂಡರೂ ಸುತ್ತ ಪೂರ್ಣ ವ್ಯಾಪಿಸುತ್ತದೆ. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಒಂದೊಂದು ಬೆಂಕಿ ಆರಿಸುವ ವಾಹನ ಇದ್ದು, ಏನಾದರೂ ಹೆಚ್ಚಿನ ಬೆಂಕಿ ಕಾಣಿಸಿಕೊಂಡರೇ ನಮ್ಮ ಅಗ್ನಿ ಶಾಸಮಕ ದಳದ ಕಚೇರಿಯಲ್ಲಿರುವ ಒಂದೇ ವಾಹನದಲ್ಲಿ ಬೆಂಕಿ ನಂದಿಸುವ ಕೆಲಸ ಮಾಡುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಹೆಚ್ಚುವರಿ ವಾಹನಗಳ ಅವಶ್ಯಕತೆ ಹೆಚ್ಚು ಇದೆ ಎಂದು ಅಭಿಪ್ರಾಯಪಟ್ಟರು.
ಕೊನೆಯಲ್ಲಿ ಆಗ್ನಿಯಿಂದ ಆಗುವ ದುರಂತದ ವೇಳೆ ಅಗ್ನಿ ಶಾಮಕ ದಳದವರು ನಿರ್ವಹಿಸುವ ಕಾರ್ಯವೈಖರಿ ಬಗ್ಗೆ ಅಣುಕು ಪ್ರದರ್ಶನ ನಡೆಸಿಕೊಟ್ಟರು. ಪಂಪ್ ಮೂಲಕ ನೀರನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸಿ ಗಮನಸೆಳೆದರು. ಭಾರತ್ ಸೇವಾದಳದ ವಲಯ ಸಂಚಾಲಕಿ ವಿ.ಎಸ್. ರಾಣಿ ಅವರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net