ಬೃಹತ್ ಮಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಜ್ಜು

ಬೃಹತ್ ಮಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಜ್ಜು
Published on

ಹಾಸನ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಕೈಗೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ ಟಿ ಶಾಂತಲಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಕಾರ್ಯಕ್ರಮದ ಪೊಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರದ ಆದೇಶದಂತೆ ಬೀದರ್‌ನಿಂದ ಚಾಮರಾಜನಗರದವರೆಗೂ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮದ ಮಾರ್ಗಸೂಚಿ ಸಿದ್ಧಪಡಿಸಿದ್ದು ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಡಿಕೇರಿಯಿಂದ ಹಾಸನಕ್ಕೆ ಸೆ.15ರಂದು ಆಗಮಿಸಲಿದ್ದು, ಅರಕಲಗೂಡು ತಾಲೂಕಿನ ಕಡುವಿನ ಹೊಸಹಳ್ಳಿ ಗ್ರಾಮದಲ್ಲಿ ಸ್ವಾಗತ ಮಾಡಲಾಗುವುದು. ಅಲ್ಲಿಂದ ಬೇಲೂರು ತಾಲೂಕಿನ ಚನ್ನಾಪುರ ಗಡಿಯ ಕೈಮರದವರೆಗೆ ಒಟ್ಟು 114 ಕಿಲೋಮೀಟರ್‌ನಲ್ಲಿ ಮಾನವ ಸರ್ಪಳಿ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದ್ದು ಇದಕ್ಕೆ ಎಲ್ಲ ಸಂಘ- ಸಂಸ್ಥೆಗಳು, ಸಾರ್ವಜನಿಕರು, ಶಾಲಾ-ಕಾಲೇಜು ಹಾಗೂ ಗ್ರಾಮದ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಯಾತ್ರೆಯು ನಮ್ಮ ಜಿಲ್ಲೆಯ ಮೂರು ತಾಲೂಕಿನಲ್ಲಿ ಹಾದು ಹೋಗಲಿದೆ. ಅರಕಲಗೂಡಿನಲ್ಲಿ ಸ್ವಾಗತಿಸಿ, ಹಾಸನ ಮತ್ತು ಬೇಲೂರು ತಾಲೂಕಿನಲ್ಲಿ ಮುಕ್ತಾಯಗೊಳಿಸಿ ಚಿಕ್ಕಮಗಳೂರಿಗೆ ಕಳಿಸಿ ಕೊಡಲಾಗುವುದು. ಈ ಸಂದರ್ಭದಲ್ಲಿ ಒಟ್ಟು 39 ಹಳ್ಳಿಗಳು ಎರಡು ತಾಲೂಕು ಒಂದು ಜಿಲ್ಲಾ ಕೇಂದ್ರದ ಮೂಲಕ 1.11 ಲಕ್ಷ ಜನರನ್ನು ಮಾನವ ಸರಪಳಿ ನಿರ್ಮಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ವಿಶ್ವ ಪಾರಂಪರಿಕ ಸ್ಥಳವಾಗಿರುವ ಬೇಲೂರಿನ ಶ್ರೀ ಚನ್ನಕೇಶವ ದೇವಾಲಯದ ಆವರಣದಲ್ಲಿ ನಕ್ಷತ್ರದ ಆಕಾರದಲ್ಲಿ ಮಾನವ ಸರಪಳಿ ನಿರ್ಮಿಸಲಾಗುವುದು. ಹಾಗೂ ವಿಶೇಷವಾಗಿ ಒಂದು ಕಿಲೋಮೀಟರ್‌ಗೆ ಒಂದು ಗಿಡವನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ದೃಷ್ಟಿಯಿಂದ ಜಿಲ್ಲಾ ಮಟ್ಟದ 9 ಅಧಿಕಾರಿಗಳನ್ನು ಮೇಲುಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಮಾನವ ಸರಪಳಿ ಹಾದು ಹೋಗುವ ಮಾರ್ಗದುದ್ದಕ್ಕೂ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿದ್ದು ಯಾವುದೇ ರೀತಿ ಲೋಪವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ 8.30 ರಿಂದ 9.30 ಒಳಗೆ ತಮಗೆ ನಿಯೋಜಿಸಿರುವ ಸ್ಥಳಕ್ಕೆ ಬಂದು ತಲುಪಬೇಕು. ನಂತರ 9.30 ರಿಂದ 9.37 ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸಿ ಸರತಿ ಸಾಲಿನಲ್ಲಿ ನಿಲ್ಲುವುದು ನಾಡಗೀತೆ, ಮುಖ್ಯ ಅತಿಥಿಗಳಿಂದ ಭಾಷಣ, ಸಂವಿಧಾನ ಪ್ರಸ್ತಾವನೆ ಓದುವುದು, ಮಾನವ ಸರಪಳಿಯಲ್ಲಿ ಕೈ ಕೈ ಹಿಡಿದು ನಿಂತಿರುವ ಚಿತ್ರವನ್ನು ಡ್ರೋನ್‌ಗಳ ಮೂಲಕ ಚಿತ್ರೀಕರಿಸಲಾಗುವುದು. ನಂತರ ಎರಡು ಕೈಗಳನ್ನು ಮೇಲೆ ಎತ್ತಿ ಜೈ ಹಿಂದ್ ಜೈ ಕರ್ನಾಟಕ ಘೋಷಣೆ ಕೂಗಿ ಸರಪಳಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಅರಕಲಗೂಡು ತಾಲೂಕಿನಲ್ಲಿ ಒಟ್ಟು 16 ಹಳ್ಳಿಗಳ ಮೂಲಕ 38 ಕಿಲೋಮೀಟರ್, ಹಾಸನ ತಾಲೂಕಿನಲ್ಲಿ ಒಟ್ಟು 10 ಹಳ್ಳಿಗಳ 43 ಕಿಲೋಮೀಟರ್, ಬೇಲೂರು ತಾಲೂಕಿನಲ್ಲಿ 13 ಹಳ್ಳಿಗಳ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಒಬ್ಬರಂತೆ ನೋಡಲು ಅಧಿಕಾರಿ ಮತ್ತು ಸಹಾಯಕ ನೋಡಲು ಅಧಿಕಾರಿಗಳನ್ನು ಹಾಗೂ 100 ಮೀಟರ್‌ಗೆ ಒಬ್ಬರಂತೆ ಒಟ್ಟು ಒಟ್ಟು 1110 ಜನ ಸರ್ಕಾರಿ ನೌಕರರನ್ನು ಉುಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದರು.

ಸೂಕ್ತ ಬಂದೋಬಸ್ತ್
ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಮಾತನಾಡಿ, ಮಾನವ ಸರಪಳಿ ನಿರ್ಮಿಸುವ ಸಂದರ್ಭದಲ್ಲಿ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಿಂದ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿ ನೇಮಿಸಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಮತ್ತು ಟ್ರಾಫಿಕ್ ಜಾಮ್ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾನವ ಸರಪಳಿ ನಿರ್ಮಿಸುವ ಕೆಲವೆಡೆ ಗ್ರಾಮಗಳು ಇರುವುದಿಲ್ಲ ಅಲ್ಲಿಗೆ ಕೆಲವರನ್ನು ನಿಯೋಜಿಸಲಾಗುವುದು. ಅವರು ಸರಿಯಾದ ಸಮಯಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿದೆ ಮತ್ತು ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ವೆಂಕಟೇಶ್ ನಾಯ್ಡು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ದೂದ್‌ಪೀರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಡಾ. ತಾರಾನಾಥ್ ಇತರರು ಇದ್ದರು.

ಸೆಲ್ಫಿ ತೆಗೆದು ಪ್ರಮಾಣಪತ್ರ ಪಡೆಯಿರಿ
ಜಿಲ್ಲೆಯ ಒಟ್ಟು 114 ಕಿಲೋಮೀಟರ್ ನಲ್ಲಿ ಮಾನವ ಸರ್ಪಳಿ ನಿರ್ಮಿಸುವ ಸಂದರ್ಭದಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ಜನರು ಅಥವಾ ಸಂಘ ಸಂಸ್ಥೆಗಳು ಭಾಗವಹಿಸಿ ಸೆಲ್ಫಿ ತೆಗೆದು ಡೆಮಾಕ್ರಮಿ ಡೇ ಕರ್ನಾಟಕ ಡಾಟ್ ಇನ್ ಅಪ್ಲೋಡ್ ಮಾಡಬಹುದಾಗಿದೆ. ತಕ್ಷಣವೇ ನಿಮಗೆ ಪ್ರಮಾಣಪತ್ರ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net