ಬೃಹತ್ ಪರದೆ ಮೂಲಕ ಐಪಿಎಲ್ ವೀಕ್ಷಣೆಗೆ ಅವಕಾಶ

Published on

ಮೈಸೂರು: ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಣೆಯ ಅನುಭವ ನೀಡುವ ಸಲುವಾಗಿ ಮೇ 20 ಮತ್ತು 21ರಂದು ನಗರದಲ್ಲಿ ಬೃಹತ್ ಪರದೆ ಮೂಲಕ ಆಟ ವೀಕ್ಷಣೆಗೆ ಕ್ರಿಕೆಟ್ ಮಂಡಳಿ ಅವಕಾಶ ಮಾಡಿಕೊಟ್ಟಿದೆ.
ಮಹಾರಾಜ ಕಾಲೇಜಿನ ಬಳಿ ಇರುವ ಸ್ಪೋರ್ಟ್ಸ್ ಪೆವಿಲಿಯನ್‌ನ ಫುಟ್‌ಬಾಲ್ ಮೈದಾನದಲ್ಲಿ ಇದಕ್ಕಾಗಿ ಬೃಹತ್ ಎಲ್‌ಇಡಿ ಪರದೆ ನಿರ್ಮಿಸಲಾಗಿದ್ದು, ಇದರ ಮೂಲಕ ಐಪಿಎಲ್ ಪಂದ್ಯಾವಳಿ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶವಿದೆ ಎಂದು ಬಿಸಿಸಿಐ ವ್ಯವಸ್ಥಾಪಕ ಅನಂತ್ ದತ್ತಾರ್ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಪಿಎಲ್ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಪಂದ್ಯಾವಳಿ ನಡೆಯುವ ಸ್ಟೇಡಿಯಂಗೆ ಹೋಗಿ ಪಂದ್ಯ ವೀಕ್ಷಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂದು ಕ್ರಿಕೆಟ್ ಮಂಡಳಿ ಈ ವ್ಯವಸ್ಥೆ ಮಾಡಿದೆ. ರಾಜ್ಯದ ಹುಬ್ಬಳ್ಳಿ ಹಾಗೂ ಮೈಸೂರು ನಗರಗಳಲ್ಲಿ ಫ್ಯಾನ್ ಪಾರ್ಕ್ ನಿರ್ಮಿಸಿದ್ದು, ಪಂದ್ಯದ ನೇರ ಪ್ರಸಾರ ಮಾಡಲಾಗುವುದು ಎಂದು ಹೇಳಿದರು.
ಬೃಹತ್ ಪರದೆಯ ಮೇಲೆ ಸೆರೆಹಿಡಿಯಲಾದ ಪ್ರತಿ ರೋಮಾಂಚಕ ಕ್ಷಣಗಳೊಂದಿಗೆ ಪ್ರಸಾರ ಮಾಡಲಾಗುವುದು. ಈ ವೇಳೆ ಸಂಗೀತ, ಫುಡ್ ಸ್ಟಾಲ್‌ಗಳು, ಪಾನೀಯಗಳ ಮಳಿಗೆ ಸಹಾ ಇರಲಿವೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಮೇ 20ರಂದು ಮಧ್ಯಾಹ್ನ 3.30ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್, ಸಂಜೆ 7.30ಕ್ಕೆ ಕೋಲ್ಕತಾ ನೈಟ್ ರೈಡರ್ಸ್ ವರ್ಸಸ್ ಲಕ್ನೊ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಹಾಗೂ ಮೇ 21 ರಂದು ಮಧ್ಯಾಹ್ನ 3.30ಕ್ಕೆ ಮುಂಬೈ ಇಂಡಿಯನ್ಸ್ ವರ್ಸಸ್ ಸನ್‌ರೈಸರ್ಸ್ ಹೈದ್ರಾಬಾದ್ ಹಾಗೂ ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿದರು.
ಮೈಸೂರು ವಲಯ ಅಧ್ಯಕ್ಷ ಬಾಲಚಂದರ್, ಸಂಚಾಲಕ ಹರಿಕೃಷ್ಣಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net