

ಹಿರೇಕೆರೂರ: ಮುಂಬರುವ ದಿನಗಳಲ್ಲಿ ಐದು ಬೃಹತ್ ನೀರಾವರಿ ಯೋಜನೆ ಮೂಲಕ ತಾಲೂಕಿನ ಎಲ್ಲ ಹಳ್ಳಿಗಳ ಶೇ. 98ರಷ್ಟು ಕೆರೆಗಳನ್ನು ತುಂಬಿಸಲಾಗುತ್ತದೆ. ಇದರಿಂದ ಅಂರ್ತಜಲ ವೃದ್ಧಿಯಾಗುವುದರ ಜತೆಗೆ ವರ್ಷಕ್ಕೆ ಎರಡು ಬೆಳೆ ಬೆಳೆದು ಕ್ಷೇತ್ರದ ರೈತರ ಬಾಳು ಸದಾ ಹಸನಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಬೆಟಕೇರೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸಬೇಕು. ಅಲ್ಲದೆ, ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಬೇಕು’ ಎಂದರು.
ಕರೊನಾ 2ಅಲೆ ಮುಗಿದು 3ನೇ ಅಲೆ ಪ್ರಾರಂಭವಾಗಿದೆ. ಈಗಾಗಲೆ ಕೇರಳ, ಮಹಾರಾಷ್ಟ್ರಗಳಲ್ಲಿ ಈ ಅಲೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ಷೇತ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ, ಪೌಷ್ಟಿಕಾಂಶದ ಕೊರತೆಯ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ ಎಂದರು.
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ರಸ್ತೆಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿವೆ. ಈ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ 25ರಿಂದ 30 ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ನಂತರ ತಾಲೂಕಿನ ಬುರುಡಿಕಟ್ಟಿ ಗ್ರಾಮದಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಶಾಲೆಯಲ್ಲಿ ನಿರ್ವಣಗೊಳ್ಳುತ್ತಿರುವ ಕೊಠಡಿಗಳ ಕಾಮಗಾರಿಗೆ ಚಾಲನೆ ನೀಡಲಾಯಿತು.
ಬೆಟಕೇರೂರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ಬಡಿಗೇರ, ಹಂಸಭಾವಿ ಗ್ರಾಪಂ ಅಧ್ಯಕ್ಷೆ ಸಂಗೀತಾ, ಅಬಲೂರು ಗ್ರಾಪಂ ಅಧ್ಯಕ್ಷೆ ಗೀತಾ ಇಂಗಳಗೊಂದಿ, ಗುತ್ತಿಗೆದಾರ ಆರ್.ಎನ್. ಗಂಗೋಳ, ರವಿಶಂಕರ ಬಾಳಿಕಾಯಿ, ರಾಜು ಹುಚ್ಚಗೊಂಡರ, ವೀರನಗೌಡ ದಳವಾಯಿ, ಉಮಾ ಚಕ್ರಸಾಲಿ, ಎಂ.ಡಿ. ವೀರಾಪುರ, ನಿರಂಜನ ಪತ್ತಾರ, ಎಸ್.ಆರ್. ಹೊಂಡದ, ಶಿವನಗೌಡ ಹಾರಮುಚುಡಿ, ಶಾಂತಪ್ಪ ಹೊಂಡದ, ಎಚ್.ವಿ. ದಾನಿಗೊಂಡರ, ಶೇಖಣ್ಣ ಬಿಳಕಿ, ತಹಸೀಲ್ದಾರ್ ಉಮಾ ಕೆ.ಎ, ಅರುಣ ಗಂಗೋಳ ಇತರರು ಇದ್ದರು.
ರಸ್ತೆ ಕಾಮಗಾರಿಗೆ ಭೂಮಿಪೂಜೆ: ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ 5.82 ಕೋಟಿ ರೂ. ವೆಚ್ಚದಲ್ಲಿ ನೂಲಗೇರಿಯಿಂದ ದಿವಗೀಹಳ್ಳಿ, ದೂಪದಹಳ್ಳಿ, ಯತ್ತಿನಹಳ್ಳಿ, ಎಂ.ಕೆ. ಗ್ರಾಮದವರೆಗೆ 7.12 ಕಿ.ಮೀ. ರಸ್ತೆ ಹಾಗೂ 7.76 ಕೋಟಿ ರೂ. ವೆಚ್ಚದಲ್ಲಿ ಹಂಸಭಾವಿಯಿಂದ ಕರ್ಗಿ, ಬೆಟಕೇರೂರ, ಡಮ್ಮಳ್ಳಿ ಗ್ರಾಮದವರೆಗಿನ 10.97 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ವೀರಭದ್ರೇಶ್ವರ, ಬಸವೇಶ್ವರ ದೇವರ ದೇವಸ್ಥಾನ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.