ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜನ್ಮದಿನದ ನಿಮಿತ್ತ ಡಿ. 16ರಂದು ಹುಬ್ಬಳ್ಳಿಯ ಘಂಟಿಕೇರಿ ಓಣಿಯ ಶ್ರೀ ಬಸವಣ್ಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಹು-ಧಾ ಪೂರ್ವ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಪೂರ್ವ ಬಿಜೆಪಿ ಘಟಕ, ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ನಡೆಯುವ ಶಿಬಿರದಲ್ಲಿ 2ಡಿ ಇಕೋ ಕಾರ್ಡಿಯೋಗ್ರಾಫಿ, ನರ್ವ್ ಕಂಡಕ್ಷನ್ ಸ್ಟಡಿ, ಬೋನ್ ಡೆನ್ಸಿಟಿ, ಇಸಿಜಿ, ಸಕ್ಕರೆ ಕಾಯಿಲೆ ತಪಾಸಣೆ, ರಕ್ತ ತಪಾಸಣೆ, ರಕ್ತದೊತ್ತಡ, ಕಣ್ಣಿನ ತಪಾಸಣೆ ನಡೆಸಲಾಗುವುದು ಎಂದರು.
ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥ ಡಾ. ಕ್ರಾಂತಿಕಿರಣ ಮಾತನಾಡಿ, ಆರೋಗ್ಯ ಶಿಬಿರದಲ್ಲಿ ಬಿಪಿಎಲ್/ಎಪಿಎಲ್ ಪಡಿತರ ಚೀಟಿವುಳ್ಳ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಕಾರ್ಡಿನ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಲಾಗುವುದು. ಶಿಬಿರಾರ್ಥಿಗಳ ನೋಂದಣಿ ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿದೆ ಎಂದರು.
ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪೂಜಾ ಶೇಜವಾಡಕರ, ದುರ್ಗಮ್ಮ ಬಿಜವಾಡ, ಸತೀಶ ಶೇಜವಾಡಕರ, ಮಂಜುನಾಥ ಬಿಜವಾಡ, ಬಸವರಾಜ ಜಾಧವ, ಶಶಿಕಾಂತ ಬಿಜವಾಡ ಪ್ರಮುಖರು ಆಗಮಿಸಲಿದ್ದಾರೆ ಎಂದರು.
ರಂಗಾ ಬದ್ದಿ, ವಿನಯ ಸಜ್ಜನ, ಮಂಜುನಾಥ ಬಿಜವಾಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.