

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಸೇವಾ ಪಾಕ್ಷಿಕ ಅಭಿಯಾನದ ನಿಮಿತ್ತ ಸೆ. 18ರಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೃಹತ್ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ವೈದ್ಯಕೀಯ ಸೌಲಭ್ಯಗಳು ಅಂದಿನ ಆರೋಗ್ಯ ಶಿಬಿರದಲ್ಲಿ ಲಭಿಸಲಿವೆ ಎಂದರು.
ಹೃದ್ರೋಗ, ನರರೋಗ, ಚರ್ಮದ ಸಮಸ್ಯೆ, ಸೀರೋಗ, ಕಣ್ಣು, ಕಿವಿ, ಮೂಗು, ಗಂಟಲು, ಮೂಳೆಗೆ ಸಂಬಂಧಿಸಿದ ರೋಗ ಸೇರಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು. ಹಲವಾರು ತಜ್ಞ ವೈದ್ಯರು ಪಾಲ್ಗೊಳ್ಳುವರು. ಅರ್ಹರಿಗೆ ಉಚಿತ ಕಣ್ಣಿನ ಶಸ ಚಿಕಿತ್ಸೆ ಮಾಡಿ, ಕನ್ನಡಕವನ್ನೂ ನೀಡಲಾಗುವುದು ಎಂದು ತಿಳಿಸಿದರು.
ಪ್ರಧಾನಿಯವರ ಜನ್ಮದಿನವಾದ ಸೆ. 17ರಂದು ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಬಾರಿಯ ದಾಖಲೆಯ ರಕ್ತವನ್ನು ದಾನಿಗಳಿಂದ ಸಂಗ್ರಹಿಸುವ ಗುರಿ ಇದೆ ಎಂದರು.
ಭಾರತವನ್ನು ಕ್ಷಯಮುಕ್ತವನ್ನಾಗಿಸಲು ಪಣ ತೊಡಲಾಗಿದೆ. ಕ್ಷಯರೋಗಿಗಳು ಇದ್ದಲ್ಲಿ ಅವರನ್ನು ದತ್ತು ಪಡೆದು, ಅವರು ರೋಗದಿಂದ ಮುಕ್ತರಾಗಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಬೆಳೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಮತ್ತು ರಾಜ್ಯಗಳ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶೇಂಗಾ, ಮೆಣಸಿನಕಾಯಿ, ಸೋಯಾಬಿನ್, ಹತ್ತಿಗೆ ಮಧ್ಯಂತರ ಬೆಳೆ ಪರಿಹಾರ ಸಿಗಲಿದೆ. ಇನ್ನುಳಿದಂತೆ ಕೇಂದ್ರ ತಂಡ ಕೆಲ ದಿನಗಳ ಹಿಂದೆಯಷ್ಟೇ ರಾಜ್ಯಕ್ಕೆ ಭೇಟಿ ನೀಡಿದೆ. ರಾಜ್ಯ ಸರ್ಕಾರ ನೀಡುವ ವರದಿಯನ್ನಾಧರಿಸಿ, ಕೇಂದ್ರ ಪರಿಹಾರ ಬಿಡುಗಡೆ ಮಾಡಲಿದೆ ಎಂದರು.